Sunday, April 7, 2013

ಚಿನ್ನು ಮತ್ತು ಅವನ ಜೀವನ --9

  
   ಕೆಲಸ ಏನೋ ಮಾಡ್ತಾ ಇದ್ದೆ ಆದರೆ ಅಲ್ಲಿನ ರಾಜಕೀಯ, ಕಿರಿ ಕಿರಿ ಹಿಂಸೆ ಅನಿಸತೊಡಗಿತು. ಮಕ್ಕಳೇನೋ ನನ್ನ ತುಂಟ ಪಾಠಕ್ಕೆ , ಕಥೆಗೆ ಕಣ್ಣು ಬಾಯಿ ಬಿಟ್ಟು ಕೂತು ಕೊಳ್ತಾ ಇದ್ರು. ಆದರೆ ನನ್ನ ಒಂದು ಕಾಲದ ಅಧ್ಯಾಪಕಿಯೂ , ಹೊಸ  ಸಹುದ್ಯೋಗಿಯೂ ಆಗಿ ಏನೋ  ಒಂಥರಾ  ಕಿರಿ ಕಿರಿ ಮಾಡಲಾರಂಭಿಸಿದರು.  ಆ ಕ್ಷಣಕ್ಕೆ ಏನು ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಮುಂದಿನ  ಶೈಕ್ಷಣಿಕ ವರ್ಷದಿಂದ ನಂಗೆ ಅಲ್ಲಿ ಕೆಲಸ ಮಾಡೋಕೆ ಮನಸ್ಸಿಲ್ಲದೆ ನಾನು ನನ್ನದೆ ಯೋಜನೆ ಹಾಕಿಕೊಂಡೆ . ನನ್ನ ಎರಡು ಆಯ್ಕೆಗಳು  ಬೇರೆ ಶಾಲೆಯಲ್ಲಿ  ಕೆಲ ಮಾಡೋದು,  ಅದರ ಜೊತೆಗೆ  ಶಿಕ್ಷರ ಹುದ್ದೆಗೆ ಇದ್ದ ಪ್ರವೇಶ ಪರೀಕ್ಷೆಯನ್ನು ಅತಿ ಹೆಚ್ಚು ಅಂಕಗಳಿಂದ ತೇರ್ಗಡೆ ಯಾಗಬೇಕಿತ್ತು. ಇಲ್ಲದೆ ಹೋದಲ್ಲಿ ದೂರದ ಊರು  ಸೇರಿ ಕಷ್ಟ ಪಡಬೇಕು ಎಂದು ಅರಿವು ಇತ್ತು . ಆ  ಪ್ರವೇಶ ಪರೀಕ್ಷೆಗೆ ನಾನು ೮-೧೦  ತಿಂಗಳ ಮೊದಲೇ ಓದಿ ಕೊಳ್ಳ ತೊಡಗಿದೆ. 
      ನಾನು ಮತ್ತೆ ಓದಿ ಕೊಳ್ಳೋಕೆ ಶುರು  ಮಾಡಿದ್ದು ಚಿನ್ನುಗೆ ಆತಂಕ , ಮೊದಲು ನಾನು ಬೆಳಗ್ಗೆ ಎದ್ದು ಓದಿಕೊಳ್ಳುತ್ತಿದ್ದರೆ ಈ ಬಾರಿ ರಾತ್ರಿ ಹೆಚ್ಚು ಓದುತ್ತಿದ್ದೆ . ರಾತ್ರಿ ಓದುವ ಪರಿ ಪಾಠ ಬೆಳೆದಿದ್ದು ನನ್ನ ಜೈಲು ವಾಸದ ಅವಧಿಯಲ್ಲಿ . ಹೀಗಾಗಿ ರಾತ್ರಿ ಬೇಗ ನಿದ್ರೆ ಬರದೆ ಇದ್ದುದರಿಂದ ತಡ ರಾತ್ರಿವರೆಗೂ ಕೂತು ಕೊಳ್ಳುತ್ತಿದ್ದೆ. ಅವನಿಗೆ ಮಲಗೋಕೆ ಪಕ್ಕದಲ್ಲೇ ಬೇಕು ನಾನು . ನಾನು ಇಲ್ಲದೆ ಅವ ಮಲಗಲ್ಲ . ಸ್ವಲ್ಪ ಹೊತ್ತು ಮಡಿಲಲ್ಲಿ ಇನ್ನೂ ಕೆಲವೊಮ್ಮೆ ಮಡಿಲು ಸರಿ ಹೋಗದೆ ಓದುವ ಟೇಬಲ್ ಮೇಲೆ ನನ್ನ ಪುಸ್ತಕದ ಎದುರು ಕೂತು ಕೊಳ್ಳುತ್ತಿದ್ದ. ಅವ ಕೂತ  ಭಂಗಿ ಕೆಲ ಬಾರಿ ನ೦ಗೆ ನಗು ತರಿಸುತ್ತಿತ್ತು. ಅವನೂ ಪುಸ್ತಕ ಓದುತ್ತಿದ್ದಂತೆ ಇತ್ತು. ಒಟ್ಟಿನಲ್ಲಿ ನಂಗೆ ಸದಾ ಅಂಟಿಕೊಂಡಂತೆ ಇರುತ್ತಿದ್ದ . 
       ಆಗ ಬೇಸಿಗೆ ಕಾಲ ಶನಿವಾರ ನಾನು ಮಧ್ಯಾಹ್ನವೇ ಮನೆಗೆ ಬರುತ್ತಿದ್ದೆ .  ಬಂದು ಫ್ಯಾನ್ ಹಾಕಿ  ಕೂತರೆ ಅವ ಮರದ ಅಡಿಯಿಂದ ಓಡಿ  ಬಂದು  ನೆಲದ ಮೇಲೆ ಮಲಗುವ ಪರಿ, ಬುಸ್ಸು ಬುಸ್ಸು  ಉಸಿರುಬಿಡೋದನ್ನು ನೆನೆಸಿದರೆ ನಂಗೆ ಈಗಲೂ ನಗು ಬರುತ್ತೆ . ಬಿಸಿಲಲ್ಲಿ ನಡೆದುಕೊಂಡು  ಬರೋದು ನಾನು, ಉಸಿರು ಬಿಡೋದು ಅವನು. ಅವನಿಗೆ ಸೆಕೆ ಸಿಕ್ಕಾಪಟ್ಟೆ ಕೆಲವೊಮ್ಮೆ ಬಾವಿ  ಕಟ್ಟೆಯ ಪಕ್ಕ ಬಟ್ಟೆ  ಒಗೆವ ಕಲ್ಲು ಇತ್ತು ಅಲ್ಲಿ ಅಮ್ಮ ಕೆಲವೊಮ್ಮೆ ಬಟ್ಟೆ ಒಗೆದರೆ ಸ್ವಲ್ಪ ಸ್ವಲ್ಪ ನೀರಿದ್ರೆ ಅಲ್ಲೇ ಬಿದ್ದು ಕೊಳ್ಳುತ್ತಿದ್ದ. ಸೆಕೆಗಾಲದಲ್ಲಿ ದಿನ ಅವನಿಗೆ ಸ್ನಾನ ಮಾಡಿಸೋಕೆ ಶುರು ಮಾಡಿದೆ. ಸ್ನಾನ ಮಾಡಿಸಿ  ಮೈ ಒರಸಿ ಬಿಟ್ರೆ ಚಂದಕ್ಕೆ ಮಲಗಿ ಗಟ್ಟಿ ನಿದ್ರೆ ಮಾಡುತ್ತಿದ್ದ. ಅವ ಹೀಗೆ ನಿದ್ರೆ ಮಾಡ್ತಾ ಇದ್ರೆ ನಂಗೆ ಅದನ್ನ ನೋಡೋದೇ ಒಂದು ಖುಷಿ !
       life goes on .... ನಂಗೆ ಮದ್ವೆಯೇ ಬೇಡ ಅಂತ ಕೂತಿದ್ದ "ಕಬಾತ್ ಕುದುರೆ"ಯನ್ನು  ಅಮ್ಮ ಏನೇನೋ ತಂತ್ರ ಹೂಡಿ ನನ್ನ ಹಸೆಮಣೆ ಹತ್ತಿಸಿಯೇ ಬಿಟ್ರು . ಅಲ್ಲಿಗೆ ನನ್ನ , ಚಿನ್ನು ಪ್ರಪಂಚಕ್ಕೆ ದೊಡ್ಡ ತ್ಸುನಾಮಿ ಅಲೆ ಎದ್ದಿತು. ಮದ್ವೆ ನಿಶ್ಚಿತಾರ್ಥದ ದಿನ ಸ್ವಲ್ಪ ರಗಳೆ ಮಾಡಿದ . ಆದ್ರು ಸಂಜೆ ಬಂದ  ಮೇಲೆ ಸುಮ್ಮನಾದ.ಅಮ್ಮ ತಮಾಷೆ ಮಾಡ್ತಾ ಇದ್ರು "ಚಿನ್ನು  ಇನ್ನು ನೀನು ಅವಳ ಬಾಲ ಬಿಡು, ಸಾಕು ಕಣೋ ಆಯಿತು ನಿನ್ನ ಅವಳ ಋಣ.  ದಿನ ಲೆಕ್ಕ ಮಾಡ್ತಾ ಇದ್ದಾಳೆ ಹಾರೋಕೆ . ಹಾರಿದ ಮೇಲೆ ನಿನ್ನ , ನನ್ನ ನೆನಪೆಲ್ಲಿ  ಅವಳಿಗೆ?" ಅಂತ ಯಾವಾಗಲೂ ಹೇಳ್ತಾ ಇದ್ರು  ಆದರೆ ಮದುವೆ ಹಿಂದಿನ ದಿನವೇ ಅವನಿಗೆ ಸುಳಿವು ಸಿಕ್ಕಿತೋ ಏನೋ?     ಅಯ್ಯಬ್ಬಾ!!!  ಹಿಂದೂ ಹೋಗೋಕೆ ಬಿಡೋಲ್ಲ ಮುಂದು ಹೋಗೋಕೋ ಬಿಡೋಲ್ಲ ಕಾಲು ಅಡಿಗೆ ಬೀಳ್ತಾ ಇದ್ದ . ಕೊನೆಗೆ ಕಂಕುಳಲ್ಲೇ ಹೊತ್ತುಕೊಂಡು ಆಚೆ ಈಚೆ ಹೋದೆ. ಆದರೆ ಸಂಜೆ ನನ್ನ ಒಂದು ಮುಖ್ಯ ದಾಖಲೆ  ಬ್ಯಾಗ್ ನಲ್ಲಿ  ಸಿಗ್ಲಿಲ್ಲ. ಎಲ್ಲಿ ಹುದುಕಿದ್ರೂ  ಸಿಗಲಿಲ್ಲ. ಸೂಟ್ ಕೇಸ್ ಹರಡಿ ಕೂತೆ. ದಾಖಲೆ  ಏನೋ ಸಿಕ್ಕಿತು ಆದರೆ ನಾನು ಸೂಟ್ ಕೇಸ್ ಹರವಿದ ರೀತಿಯಲ್ಲೇ ಅವನಿಗೆ ಏನೋ ಬಲವಾದ ಸುಳಿವು ಸಿಕ್ಕಿ ಪೆಚ್ಚು ಮೊರೆ ಮಾಡಿ ಮೂಲೆಯಲ್ಲಿ ಹೋಗಿ ಕೂತು ಬಿಟ್ಟ. ರಾತ್ರಿ ಜೊತೆಗೆ ಮಲಗಿದ. ಬೆಳಗ್ಗೆ ಬೇಗ ಎದ್ದು ನಾನು ಹೊಸ ಸೀರೆ ಉಟ್ಟು ರೆಡಿ ಅದೇನೋ...  ಸಿಕ್ಕಾ  ಪಟ್ಟೆ ಹುಚ್ಚು ಹಿಡಿದಂತೆ ಮಿಯಾವ್ ಮಿಯಾವ್ ಎಂದು ಮನೆ ಒಳಗೆಲ್ಲಾ  ಓಡಾಡಿದ. ಏನು ಹಾಕಿದರೂ  ಮುಟ್ಟಿ  ನೋಡಲಿಲ್ಲ. 
      ನಂಗೆ ಮನಸಲ್ಲಿ ಸಿಕ್ಕಾಪಟ್ಟೆ ಕಸಿವಿಸಿ ಮೊದಲೇ ಏನೋ ಒಂದು ಹಿಂಸೆ ಈ ಮದುವೆ ಎಂಬ ಪರಿಕಲ್ಪನೆ. ಏನೂ ಮೂಗು ದಾರ ಹಾಕಿದ ಹಾಗೆ ಆಗ್ತಾ ಇತ್ತು. ಸಾಲದಕ್ಕೆ ಈ ಚಿನ್ನುನ  ಈ ವರ್ತನೆ ... ನಂಗೆ ಈ ಮದ್ವೆಯೂ ಬೇಡ ಯಾರ ಅಗಲಿಕೆಯೂ ಬೇಡ ನಗೆ ಈ ಮದ್ವೆಯೇ ಬೇಡ ಅನ್ನೋವಷ್ಟು ಹಿಂಸೆ. ಅಮ್ಮ ಹೇಳ್ತಾನೆ ಇದ್ರೂ ಸಾಕು ಸಾಕು ಹೊರಡು ಹೊರಡು ಅಂತ .. ಏನೂ ಹೇಳದೆ ಸುಮ್ಮಗೆ ಚಪ್ಪಲಿ ಮೆಟ್ಟಿ ದಾಪುಕಾಲು  ಹಾಕಿ ಮನೆಯಿಂದ ಹೊರ ಬಿದ್ದೆ . ಮದ್ವೆ ಆಯಿತು, ಮತ್ತೆ ಜೈಲು ಪಾಲಾದ ಅನುಭವ. ಮುಟ್ಟಿದ ಕೂಡ್ಲೇ ಅಮ್ಮನಿಗೆ ಫೋನ್ " ಅಮ್ಮ ನೀನು  ಹೇಗಿದೀಯಾ ? ಚಿನ್ನು ಹೇಗಿದ್ದಾನೆ ?'' ಅಯ್ಯೋ ಅತ್ತು ಅತ್ತು ಅವನ ಸ್ವರವೇ ಇಲ್ಲ ಬೆಳಗ್ಗಿಂದ ಏನೂ ತಿಂದೇ  ಇಲ್ಲ . ಹಾಕಿದ್ದೆಲ್ಲ ಹಾಗೆ ಇದೆ ಅವ ಮಿಯಾವ್ ಅಂದ್ರೂ ಸ್ವರವೇ ಹೊರಗೆ ಬರ್ತಾ ಇಲ್ಲ !" ಅವನಿಗೆ ಲಾಡು ಅಂದ್ರೆ ತುಂಬಾ ಇಷ್ಟ . ಅದೂ ಕೊಟ್ಟೆ ಉಹು....  ಮುಟ್ಟೋದು ಇರಲಿ ಅದು ಏನು? ಎಂದು ನೋಡೋಕೂ ಅವ ಎದ್ದು ಬರಲಿಲ್ಲ . ನೀನು ಕೊನೆಗೆ ತೆಗೆದಿಟ್ಟ ನಿನ್ನ ಅಂಗಿ ಮೇಲೆ ಹೋಗಿ ಕೂತು ಬಿಟ್ಟಿದ್ದಾನೆ ಏಳೋದು ಇಲ್ಲ." ನಂಗೆ ಏನು ಹೇಳೋಕೂ ಆಗ್ಲಿಲ್ಲ . 'ಸರಿ ಸ್ವಲ್ಪ ಹಾಲು ಗ್ಲುಕೋಸ್  ಅವನ ಬಾಯಿಗೆ ಕೊಡು' ಅಂದೆ. ಅಮ್ಮ "ನಾನು ಮನೆಗೆ ಬಂದು ಮಾಡಿದ್ದೇ ಮೊದಲ ಕೆಲಸ ಅದು'' ಅಂದಾಗ  ಸ್ವಲ್ಪ ನಿರಾಳವಾಯಿತು . 
      ಎರಡು ದಿನ ಬಿಟ್ಟು ಅಮ್ಮನ ಮನೆಗೆ ಬಂದಾಗ ಮುಖ ಸಪ್ಪಗೆ ಮಾಡಿ  ಒಂದು ಮೂಲೆ ಸೇರಿದ್ದ. ನನ್ನ ಕಂಡ ಕೂಡ್ಲೇ ಮತ್ತೆ ಅದೇ ಉಲ್ಲಾಸ ಉತ್ಸಾಹ! ಏನು ಹಾಕಿದೆನೋ ಎಲ್ಲ ಸ್ವಲ್ಪ  ತಿಂದ, ನನ್ನ ಮಡಿಲು ಏರಿ ಕೂತು ಬಿಟ್ಟ. ನನ್ನ ಪತಿರಾಯನೋ ನನ್ನ ಚಿನ್ನು ವನ್ನು ಕಣ್ಣು ಕೆಕ್ಕರಿಸಿ ನೋಡಿದ್ದೇ  ನೋಡಿದ್ದು ... ಚಿನ್ನುಗೆ ಅದರ ಪರಿವೆಯೇ ಇರಲಿಲ್ಲ ಅವ ಹಾಯಾಗಿ ಗುರುಗುರು ಸದ್ದು ಮಾಡುತ್ತ ಕೂತು ಬಿಟ್ಟ. ಮತ್ತೆ ಹೊರತು ನಿಂತಾಗ ಮತ್ತದೇ ಬೇಸರ ಅವನಿಗೆ! 
       ಹಾಗೂ  ಹೀಗೂ ದಿನ ಕಳೆದೇ ಹೋಗಿತ್ತು. ರಾತ್ರಿ ಅವನ ರಗಳೆ ಜೋರಾಗುತ್ತಿತ್ತು ಅಂತ ಅಮ್ಮ  ಹೇಳ್ತಾ ಇದ್ರು. ಹೇಗೋ ನಿಭಾಯಿಸ್ತ  ಅವನನ್ನು ಪಾಲನೆ ಪೋಷಣೆ ಮಾಡಿದ್ದು  ಆಯಿತು.  ಆದರೆ ಚಿನ್ನುಗೆ ನಾನು ಆಗಾಗ ಬರ್ತಾ ಇದ್ದಿದ್ದು ಏನೋ ಒಂದು ಖುಷಿ. ಅದಿಕ್ಕೇ ಹೊಂದಿಕೊಂಡ  ಆದರೂ ಹೊರಟು ನಿಂತಾಗ ರಗಳೆ ಮಾಡ್ತಾ ಇದ್ದ . ಅಂತೂ  ನಾನು ಹಾರುವ ದಿನ ಬಂದೇ ಬಿಟ್ಟಿತು. ಅಲ್ಲಿಗೆ ನನ್ನ ಚಿನ್ನು ಬಂಧ ಸಾವಿರ ಸಾವಿರ ಮೈಲುಗಳ ದೂರದಲ್ಲಿ  ಬಂಧಿಸಲ್ಪಟ್ಟಿತು. ಚಿನ್ನು ಮುಗ್ಧ ಅವನಿಗೆ ಗೊತ್ತಿಲ್ಲ, ನಾನು ಇನ್ನು ವರ್ಷಕ್ಕೆ ಒಮ್ಮೆ ಬರುವ ಅತಿಥಿ  ಅಂತ.....
  
ಎಂಥಾ ದಿನಗಳವು .....
ಮರೆಯಾಗಿ ಹೋದವು 
ಮಿಂಚಂತಾ ಕ್ಷಣಗಳವು
ಇನ್ನೆಂದೂ ಬಾರವು ...
 ಈ ಭಾವಗೀತೆ ನನ್ನ ನೆನಪಲ್ಲಿ ಸದಾ ....

No comments: