Tuesday, April 16, 2013

ವಿಮಾನಯಾನ -ನನ್ನ ಫ್ಲೈಟ್ ಫೋಬಿಯ

      ಕಾಡಿನಲ್ಲಿ ಸ್ವತಂತ್ರವಾಗಿ ಲಾಗ ಹಾಕಿಕೊಂಡು ಅದೇ ಸ್ವರ್ಗ ಅಂತ ಭಾವಿಸಿದ್ದ ಒಂದು ಕಾಡು ಕಪಿಯನ್ನು ಬಂಧಿಸಿ ಪಂಜರದಲ್ಲಿ ಇಟ್ಟರೆ ಹೇಗೆ ಇರಬಹುದು ಆ ಕಪಿಯ ಅವಸ್ಥೆ ನೀವೇ ಹೇಳಿ ? ಹಾಗೆ ಆಗಿ ಹೋಯಿತು ನನ್ನ ಪರಿಸ್ಥಿತಿ.
       ಮದುವೆ ಆದಾಗಲೇ ಮೂಗಿಗೆ ಒಂದು ಮೂಗುದಾರ ಬಿದ್ದ ಹಾಗೆ. ಮುಂದೆ ಹೋಗುವಂತೆ ಇಲ್ಲ ಹಿಂದೆ ಬರುವಂತೆ ಇಲ್ಲ. ಆಚೆ ಈಚೆ  ನೋಡೋದರಲ್ಲಿ ನನ್ನ ಪತಿರಾಯ ಭಾರತ ಬಿಟ್ಟು ಪರಾರಿಯಾಗಿ ಮರುಭೂಮಿಯ ಸ್ವರ್ಗ ಸೇರಿ ಆಗಿತ್ತು. ಅಲ್ಲಿಂದ .....   ಅಬ್ಬಾಬ್ಬಾ ನನ್ನ ಸ್ಥಿತಿ  ದೇವರಿಗೇ ಪ್ರೀತಿ . ಒಮ್ಮೆ ಈ ನರಕದಿಂದ ಪಾರಾದರೆ ಸಾಕು ಅಂತ ಅನ್ನಿಸೋಕೆ  ಶುರು. ನಾನು ಫೋನ್ ನಲ್ಲಿ  ಮಾತನಾಡಿದರೂ ಕಣ್ಣು ಕೆಕ್ಕರಿಸಿ ನೋಡೋದು. ಸುಮ್ಮನೆ ಕೂತರೂ ಏನೋ ಒಂತರ ಮಾಡಿ ನೋಡೋದು. ಅಂತೂ ಏನೇನೋ ಜಂಬೋ ಸರ್ಕಸ್ ಮಾಡಿ ಎರಡು ಬಾರಿ ಡೆಲ್ಲಿ ವರೆಗೆ ಹೋಗಿ ಪಡಬಾರದ ಪಾಡು ಪಟ್ಟು ಅಂತೂ ಇಂತೂ ವೀಸಾ & ಫ್ಲೈಟ್ ಟಿಕೆಟ್ ಬಂದಾಗ ಉಸ್ಸಪ್ಪಾ ಅನ್ನಿಸಿತ್ತು.
   
    ನಾನು ಹೇಳಿ ಕೇಳಿ ಹಳ್ಳಿ ಮಿಕ . ನಾನು ವಿಮಾನವನ್ನು ಬಾನಂಗಳದಲ್ಲಿ ನೋಡಿದ್ದೇ ಹೊರತು ವಿಮಾನ ನಿಲ್ದಾಣದಲ್ಲಿ ವಿಮಾನದ ಹಾರಾಟವನ್ನೂ  ನೋಡಿದವಳೂ ಅಲ್ಲ. ಆಗ ನಂಗೆ ಒನಕೆ ಒಬವ್ವನ ಧೈರ್ಯ ಇತ್ತು. ಧೈರ್ಯ ದಲ್ಲಿ ಹೊರಡೋ ಸಿದ್ದತೆ ಮಾಡಿಕೊಂಡೆ. ಜುಲೈ ತಿಂಗಳು ಕರಾವಳಿ ಊರು , ಆದ್ರು ಮಳೆ ಬಾರದೇ ಒಳ್ಳೆ ಬೇಸಿಗೆಯಂತೆ ಇತ್ತು. ಆದ್ರೆ 15  ದಿನದಿಂದ ಬಾರದ ಮಳೆ ನಾನು ಹೊರಡುವ ಮುನ್ನಾ ದಿನ ಧೋ ಎಂದು ಸುರಿಯೋಕೆ ಶುರು. ಬಹುಶಃ ವರುಣ  ದೇವನಿಗೂ ಖುಷಿ ಅನ್ಸುತ್ತೆ ನನ್ನ ಆವಾಸ ಭಾರತದಲ್ಲಿ ಕೊನೆಕಂಡಿದ್ದು .   ನಂಗೆ ತಲೆ ಮೇಲೆ ಆಕಾಶ ಬಿದ್ದಂತೆ ಆಯಿತು.  ದೂರ ಹೋಗೋದು ಅಂತ ನನ್ನ ಅತ್ತೆ ಒಂದಷ್ಟು ದೇವಸ್ಥಾನ ಸುತ್ತಿಸಿದ್ದೋ ಆಗಿತ್ತು ಆದರೂ ಇನ್ನು ಹತ್ತು ಹಲವು ಬಾಕಿ! ಆ ಮಳೆ ಯಲ್ಲೇ ಹೋಗಿ ಬಂದೆವು  . ಒಳ್ಳೆ ನೆರೆಯೇ ಸೃಷ್ಟಿ ಆಗಿತ್ತು . ಹೀಗೆ ಆದ್ರೆ ನಾಳೆ ಏರ್ ಪೋರ್ಟ್ ಗೆ ಹೇಗಪ್ಪ ಹೋಗೋದು ಎಷ್ಟು ಬೇಗ ಹೊರಡಬೇಕು ಎಂದು  ಆತಂಕದಲ್ಲೇ ಇದ್ದೆ . ಅಮ್ಮನ ಮನೆಯಿಂದ ಹೆಚ್ಚು ಅಂದ್ರೆ ಒಂದು ಘಂಟೆ ಆದ್ರೆ ನನ್ನ ಪತಿರಾಯನ ಮನೆಯಿಂದ  ಬರೋ ಬರಿ 2.30 ಘಂಟೆ ಬೇಕು . ಹೇಳಿದ್ರೆ ನನ್ನ  ಅತ್ತೆ ಕೇಳಲಿಲ್ಲ ನಾನು ಅಮ್ಮನ  ಮನೆಯಿಂದ ಹೋಗ್ತೀನಿ ಅಂದ್ರೆ ಅದು ಇದು ಶಾಸ್ತ್ರ  ಹೇಳಿ ನನ್ನ  ಬಾಯಿ ಮುಚ್ಚಿಸಿದರು.
              ರಾತ್ರಿ ಇಡೀ ಗಾಳಿ ,ಗುಡುಗು, ಸಿಡಿಲಿನಿಂದ ಕೂಡಿದ ಸುರಿಮಳೆ ಬೆಳಗ್ಗಿನ ಜಾವದ ವರೆಗೂ ನಿಲ್ಲಲೇ ಇಲ್ಲ ಇತ್ತ ನಂಗೆ ನಿದ್ರೆಯೂ ಇಲ್ಲ ! ಅಂತೂ 5 ಘಂಟೆಗೆ ಶಾಂತವಾಯಿತು ಅಯ್ಯಬ್ಬಾ ಬದುಕಿದೆ ಅಂತ ಯೋಚಿಸಿ ೨ ಚಂಡು ಮಲ್ಲಿಗೆ ಮುಡಿದು ,ಹೊರಟು ನನ್ನ ಗಂಟು ಮೂಟೆ ಹೊತ್ತು 5.30 ಕ್ಕೆ ಹೊರ ಬೀಳ್ತೀನಿ ಅನ್ನೋವಾಗ ಮತ್ತೆ ತುಂತುರೂ ಅಲ್ಲಿ ನೀರ ಹಾಡು ಶುರು . ನನ್ನ ಅತ್ತೆ ಅವತ್ತು ಕೆಲ ದೇವಸ್ಥಾನಕ್ಕೆ  ಪ್ರದಕ್ಷಿಣೆ ಹಾಕುವ ಕಾರ್ಯಕ್ರಮ  ಉಳಿಸಿ ಕೊಂಡಿದ್ರು . ಏನು ಮಾಡೋ ಹಾಗಿಲ್ಲ . ನಂಗೆ ಮೊದಲೇ ಆತಂಕ ರಸ್ತೆ ಸ್ಥಿತಿ ಹೇಗಿದ್ಯೋ ಎಲ್ಲಿ ಮರ ಉರುಳಿ ಏನು ಆವಾಂತರ ಕಾದಿದ್ಯೋ ಅಂತ.  ಇಲ್ಲಿ ಒಂದೊಂದೇ ನನ್ನ ಕಟ್ಟೆ  ಪೂಜೆ !
             ಅಂತೂ ೩ ಕಟ್ಟೆ ಪೂಜೆ ಮುಗಿಸಿ ಅಮ್ಮನ ಮನೆಗೆ ಬಂದು ಅಮ್ಮ ಅಪ್ಪನನ್ನು ಕಾರು ಹತ್ತಿಸಿ ಕೊಂಡು ಅಲ್ಲಿಂದ ಮತ್ತೆ ಕಟೀಲು ದೇವರ  ಪೂಜೆ ಮುಗಿಸಿ , ಮಂಗಳೂರು ವಿಮಾನ ನಿಲ್ದಾಣ ತಲುಪಿದಾಗ ಘಂಟೆ 9.45 . ಮಳೆ ಇರಲಿಲ್ಲ ಸದ್ಯ ಮಳೆ ನಿ೦ತಿತು ಅಂತ ನೆಮ್ಮದಿಯಿಂದ  ನನ್ನ ಸರಂಜಾಮು ಟ್ರೋಲಿಗೆ ಹಾಕಿ, ನನ್ನ ಹೊರತು ಉಳಿದ ಮೂವರಿಗೆ ಎಂಟ್ರಿ ಪಾಸ್ ಖರೀದಿಸಿಕೊಟ್ಟು , ವಿಮಾನ ನಿಲ್ದಾಣ ಪ್ರವೇಶಿಸಿದೆ. ಅಲ್ಲಿ ನನ್ನ ಲಗೇಜ್ ಸ್ಕ್ರೀನ್ ಆದಾಗ  ಅಲ್ಲಿನ ಸಿಬ್ಬಂದಿಗಳು ನನ್ನ ಅಡ್ಡ ಹಾಕಿದರು. ಇದ್ರಲ್ಲಿ ಏನೋ ಇಲೆಕ್ಟ್ರಾನಿಕ್ ಸಾಮಾನು ಇದೆ . ಅದನ್ನು ತೆಗೆಯಿರಿ . ಅಯ್ಯೋ ಭಗವಂತ !!! ನಾನೇ ಪ್ಯಾಕ್ ಮಾಡಿದ ಲಗೇಜ್ ಏನೂ ಇಲ್ಲ ಅಂದೆ. ಇಲ್ಲ ಇದ್ರಲ್ಲಿ ಇದೆ ಸುಮ್ನೆ ಸುಳ್ಳು ಹೇಳ್ಬೇಡಿ ನಂಗೆ ಸಿಟ್ಟೇ ಬ೦ದು ಹೋಯಿತು. ನಿಜ ನಾನು ಡಿ. ಟಿ. ಹೆಚ್ ಖರೀದಿಸಿ ತರುವ ಯೋಜನೆ ಹಾಕಿದೆ ಆದರೆ ಕೊನೆಯಲ್ಲಿ ಬಾಕ್ಸ್ ಬಿಟ್ಟೆ ಬಂದೆ. ಒಂದು ಪಕ್ಷ ಭಾರತದಲ್ಲಿ ಪಾರಾಗಿ  ಬಂದರೂ ದುಬೈಗೆ ಬರೋದಿಲ್ಲ ಅಂತ  ಸುಮಾರು ಜನ ಹೇಳಿದ್ದು ನೋಡಿ ನನ್ನ ಯೋಜನೆ ಕೈ ಬಿಟ್ಟೆ . ಏನು ಇಲೆಕ್ಟ್ರಾನಿಕ್ ವಸ್ತು ಇರಲಿಲ್ಲ ,ಸರಿ ಜಗಳ ಕಾದೆ. ಆ ಸಿಬ್ಬಂದಿಗಳು ನನ್ನ ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದ್ರು . "ಇಲ್ಲ ನಿಮ್ ಲಗೇಜ್ ನಲ್ಲಿ ಕೊಬ್ಬರಿ ಎಣ್ಣೆ ಇದೆ." ' ಹೂ೦ ಇದೆ ಏನೀಗ ? ನಂಗೂ ಗೊತ್ತು ಏನು ಎಷ್ಟು ಕೊಂಡು  ಹೋಗಬಹುದು ಅಂತ, ಸುಮ್ನೆ ನಿಮ್ ನಾಟಕ ಸಾಕ್ ಮಾಡಿ ನೀವು ಏನು ಮಾಡಿದ್ರೂ  ನಾನು ಒಂದು ರೂಪಾಯಿ ನಿಮಗೆ  ಕೊಡೋಲ್ಲ ಅದು ಏನು ಮಾಡ್ತೀರೋ ಮಾಡಿ ಕೊಳ್ಳಿ ಅಂದೆ. ನಿಮ್ಮ ಹುನ್ನಾರ ಗೊತ್ತು , ಥೂ ನಿಮ್ಮ ಕೊಳಕು ಬುದ್ದಿಯೇ' ಅಂತ ಹೇಳಿದ ಮೇಲೆ 'ಇನ್ನು ಹಳ್ಳ ತೋಡಿ ಪ್ರಯೋಜನ ಇಲ್ಲ ಈ ತೋಳ ನಮ್ಮ ಹಳ್ಳಕ್ಕೆ ಬೀಳೋಲ್ಲ' ಅಂತ ಅರಿವಾಗಿ ಸುಮ್ನೆ ಒಳಗೆ ಬಿಟ್ರು.  ಇತ್ತ ಕಡೆಯಿಂದ ಕಂಗಾಲಾದ ನನ್ನ ಅಮ್ಮನ ಫೋನ್ "ಏನೇ ನಿನ್ನ ರಗಳೆ ಅಲ್ಲೂ ಜಗಳ ಕಾಯಿಕೊಂಡು ರಾಮ ರಾಮ !   ನಂಗೆ ಎಲ್ಲ ವಿವರವಾಗಿ ಹೇಳುವ ತಾಳ್ಮೆ ಇಲ್ಲದೆ "ಸ್ವಲ್ಪ ಸುಮ್ನೆ ಇರು ಎಲ್ಲ ಪ್ರಕ್ರಿಯೆ ಮುಗಿಯಲಿ ಎಲ್ಲಾ  ಹೇಳುವೆ ಇನ್ನು ನಡುವೆ ನಡುವೆ ಕರೆ ಮಾಡಬೇಡ ಎಂದು ಹೇಳಿ ಲೈನ್ ಕಟ್ ಮಾಡಿ ಇಟ್ಟೆ. ಮುಂದಕ್ಕೆ ಹೋದೆ ನನ್ನ ಲಗೇಜ್ ನಿಗದಿ  ಪಡಿಸಿದ್ದಕ್ಕಿಂತ  ಸುಮಾರು 19 ಕೆ. ಜಿ ಹೆಚ್ಚಾಗಿತ್ತು. ಏನು ಮಾಡಲಿ ? ಆಗ ಪ್ರತಿ ಕೆ. ಜಿ.ಗೆ ರೂ. 350 ಇಷ್ಟು ಕೊಟ್ಟು ಕೊಂಡು  ಹೋಗುವುದು  ಸಾಧ್ಯ ಇಲ್ಲ ಅನ್ನಿಸಿ, ಇದಕ್ಕಿಂತ ಕಮ್ಮಿಯಲ್ಲಿ ಕೊಂಡು  ಹೋಗಲು ಯಾವುದಾದರೂ ದಾರಿ ಇದೆಯೇ  ಯೋಚಿಸಿದೆ. ಕಾರ್ಗೋ ಮಾಡೋಣ ಅಂದು ಯೋಚಿಸಿ ಕೆಲ ಸ್ನೇಹಿತರಿಗೆ ಕರೆ ಮಾಡಿ ನನ್ನ ಅವಸ್ಥೆ  ಹೇಳಿ ನನ್ನ ಉಳಿದ 19 ಕೆ. ಜಿ. ಗೆ ಒಂದು ದಾರಿ ಕಾಣಿಸಿದೆ. ನನ್ನ ಜೊತೆ ಬರುವ ಸರಂಜಾಮಿನಲ್ಲಿ ಬರೀ ಎಣ್ಣೆ ,ತುಪ್ಪ,ತಿಂಡಿ ,ಚಕ್ಕುಲಿ , ಬಗೆ ಬಗೆಯ ಉಪ್ಪಿನಕಾಯಿ, ಸಾಂಬಾರು, ಮಸಾಲೆ ಪುಡಿಗಳೇ ! ಅಷ್ಟು ನನ್ನ ಅಮ್ಮ ಹಾಗೂ ಅತ್ತೆಯ ಕೈರುಚಿಗಳು ! ಯಾವುದನ್ನೂ ಕೆಳಗೆ ಬಿಡೋಕೆ ಮನಸ್ಸಾಗದೆ ಅದನ್ನೆಲ್ಲ ತಂದೆ. ಆದರೆ ನನ್ನ ಒಂದೇ ಜೀವಾಳವಾದ ಒಂದು ಪುಸ್ತಕವೂ  & ಬಟ್ಟೆಗಳು ನನ್ನ ಜೊತೆ ಬರಲಿಲ್ಲ ಅದೆಲ್ಲವೂ 19 ಕೆ ಜಿಯಲ್ಲಿ  ಸೇರಿತ್ತು.  ಅಯ್ಯೋ ಮತ್ತೆ ಕೊನೆಗೆ ನೆನಪಾಗಿ ತರಾತುರಿಯಲ್ಲಿ ಒಂದು ಸಲ್ವಾರ್ , ಒಂದು ನೈಟಿಯನ್ನು ನನ್ನ ಕ್ಯಾಬಿನ್ ಬ್ಯಾಗ್ ನಲ್ಲಿ ತುರುಕಿ ಓಡಿ  ಬಂದು ಲಗೇಜ್  ರಗಳೆ ಮುಗಿಸಿ, ಬೋರ್ಡಿಂಗ್ ಪಾಸ್ ಪಡೆದುಕೊಂಡೆ. ಆಗ ಅಮ್ಮ ಅಪ್ಪ ಅತ್ತೆಗೆ ಗ್ಯಾಲರಿಗೆ ಬನ್ನಿ ಅಂತ ಹೇಳಿ ,ನಾನು ಅಲ್ಲಿಂದ ಮುಂದೆ ಎಮಿಗ್ರೇಶನ್ ಪ್ರಕ್ರಿಯೆಗೆ ಹೋದೆ ! ಅಲ್ಲಿ ಹೋಗಿ ಅಂದ್ರು ಸೀದಾ  ಹೋದೆ.  ಅಲ್ಲಿ ಎಕ್ಸಿಟ್ ಸೀಲ್ ಬಿದ್ದ  ಮೇಲೆ ನೆನಪಾಯಿತು. ನನ್ನ  ಕ್ಯಾಬಿನ್ ಬ್ಯಾಗ್  ಲಗೇಜ್ ಕೌಂಟರ್ ನಲ್ಲೇ ಬಾಕಿ ! ಅಯ್ಯೋ ನನ್ನ  ಬ್ಯಾಗ್ ಅಲ್ಲಿದೆ ಅ೦ದೆ.  ಇಲ್ಲ ಇನ್ನು ಹಿಂದೆ ಹೋಗೋ ಹಾಗೆ ಇಲ್ಲ  ಅನ್ನೋದೇ ? ಅಲ್ಲಿ ಮತ್ತೆ ಜಗಳಕಾದೆ . "ನನ್ನ ದಾಖಲೆಗಳೆಲ್ಲಾ ಅದರಲ್ಲೇ ಇದೆ . ಒಂದೋ ನನ್ನ  ಬ್ಯಾಗ್ ತಂದು ಕೊಡಿ ಇಲ್ಲ ನನ್ನ ಹೋಗೋಕೆ ಬಿಡಿ."  ಕೊನೆಗೆ ಅಂತೂ 2  ಅಧಿಕಾರಿಗಳೊಂದಿಗೆ ಮತ್ತೆ ನನ್ನ ಕ್ಯಾಬಿನ್ ಬ್ಯಾಗ್ ತರೋಕೆ ಹಿಂದೆ ಬರುವಾಗ  ಮೆಟ್ಟಿಲಿನಿಂದ ಕೆಳಗೆ ಇಳಿವಾಗ ಕಾಲು ಕೆಳಗೆ ಇಟ್ಟಿದ್ದೆ ಗೊತ್ತು  ಜಾರಿ ಬಿದ್ದೆ. ನನ್ನ ಬೋರ್ಡಿಂಗ್ ಪಾಸ್ ಒಂದು ಕಡೆ ನನ್ನ  ಪಾಸ್  ಪೋರ್ಟ್ ಒಂದು ಕಡೆ  ರಾಮ ರಾಮ ಥೂ ಹೊರಟ ಸಮಯವೇ ಸರಿ ಇಲ್ಲ ಅಂದುಕೊಂಡು ಎದ್ದು ಎಲ್ಲ ಬಾಚಿ ಕೊಂಡು ಅಂತೂ ಬ್ಯಾಗ್ ಹಿಡಕೊಂಡು ವಾಪಾಸ್ ಬಂದು ವೈಟಿಂಗ್ ರೂಂಗೆ ಬಂದು ಕಾಲಿಟ್ಟೆ  ಸಮಯ 10. 30.  ಅಮ್ಮನಿಗೆ ಫೋನ್ ಮಾಡಿದೆ. ಹೇಳಿದೆ , ಉಸ್ಸಪ್ಪ ಸಾಕೋ ಸಾಕು ಈ ಮದುವೆಯೂ  ಸಾಕು ಈ ವಿಮಾನಯಾನವೂ ಸಾಕು ಅಂತ. ಇಷ್ಟು ಹೇಳಿದಾಗ ಅಲ್ಲೆನೋ  ಪ್ರಕಟನೆ  ಕೂಗಿ ಹೇಳತೊಡಗಿದರು. ಮತ್ತೆ ಲೈನ್ ಕಟ್ ಮಾಡಿ ಕೇಳಿಸಿಕೊಂಡೆ. ಆ ದಿನ "ಏರ್ ಇಂಡಿಯಾ ಎಕ್ಸ್ ಪ್ರೆಸ್  ವಿಮಾನ 2 ಘಂಟೆ ತಡವಾಗಿ ಹೊರಡುತ್ತದೆ ಇದಕ್ಕಾಗಿ ನಾವು ವಿಷಾದಿಸುತ್ತೇವೆ." ಥೂ ಕರ್ಮ ಕರ್ಮ ಭಾರತದಲ್ಲಿ ಒಂದೂ ಸಮಯಕ್ಕೆ ಸರಿಯಾಗಿ ಹೊರಡೊಲ್ಲ. ಮತ್ತೆ ವಾಪಾಸ್ ಓಡಿ ಬಂದು ಅಲ್ಲೇ  ಇದ್ದ ಸೆಕ್ಯೂರಿಟಿ ಯವನ ಬಳಿ ತರಾಟೆ ಅಷ್ಟು ಹೊತ್ತು ಇಲ್ಲಿ  ಕೂತು ಏನು ಮಾಡಲಿ? ನಾನು ಗ್ಯಾಲರಿಗೆ ಹೋಗುವೆ ಅಲ್ಲಿ ನನ್ನ ಅಮ್ಮ ಇದ್ದಾರೆ  ಅಂತ. ಆತ  "ಇಲ್ಲ ಮೇಡಂ ಇನ್ನು ಇಲ್ಲೇ ವಿಮಾನ ಹತ್ತೊವರೆಗೆ  ಹೊರಗೆ ಹೋಗೋ ಹಾಗೆ ಇಲ್ಲ ಅನ್ನೊದೇ ? ಪೆಚ್ಚು ಮೋರೆ ಹಾಕಿ ಬಂದು ಕೂತೆ.  

           ಅಲ್ಲಿಂದ ಮತ್ತೆ ಅಮ್ಮನಿಗೆ ಫೋನ್ ನೀನ್ ಎಲ್ಲಿದೀಯ ನಾನು  ನಿಂಗೆ  ಕಾಣುತ್ತೀನಾ?  ಅಮ್ಮ ನಂಗೆ ಫೋನ್ ನಲ್ಲಿಯೇ ನೀನು ಕಾಣ್ತಾ ಇದ್ದೀ  ನಂಗೆ,  ನೋಡು ಸ್ವಲ್ಪ ಹಿಂದೆ ಬಾ ನಾನು ಕಾಣಬಹುದು. ಹಿಂದೆ ತಿರುಗಿಬಂದು ನೋಡಿದೆ ಕಾಣೋಕೆ ಸಿಕ್ಕರು. ಫೋನೆನಲ್ಲೇ  ಹೇಳಿದೆ "ಅಮ್ಮ ೨ ಘಂಟೆ ವಿಮಾನ ತಡ ಅಂತೆ." ಅಮ್ಮ "ಅಯ್ಯೋ ಮತ್ತೆ ಯಾಕೆ ನೀನು  ಅಷ್ಟು ಅವಸರದಲ್ಲಿ ಓಡಿ  ಹೋಗಿದ್ದು" ಅಂದ್ರು ಏನು ಹೇಳೋದು ನನ್ನ ಅದೃಷ್ಟಕ್ಕೆ ! ಸರಿ ಅಲ್ಲಿ ಗಾಜಿನ ಗೂಡಿನಲ್ಲಿ ಅಮ್ಮ ಅಪ್ಪ ಅತ್ತೆ ಬಂಧಿ ! ಮಾತನಾಡಿದರೆ ಕೇಳೋಲ್ಲ ಫೋನ್ ಮಾತ್ರವೇ ಸಾಧ್ಯ. ಅಮ್ಮ ಎದುರಲ್ಲೇ ಇದ್ರೂ ಅಮ್ಮನ ಪಕ್ಕ ಕೂರೋ ಹಾಗಿಲ್ಲ ಅಮ್ಮನ ಜೊತೆ ಲಲ್ಲೆ ಗರೆಯೋ ಹಾಗಿಲ್ಲ. ಜೀವನದ ವಿಪರ್ಯಾಸ ನೆನೆದು ಅಳು ಬರೋದು ಒಂದೇ ಬಾಕಿ ನಂಗೆ ನನ್ನ ಸ್ಥಿತಿ ಬಸವಣ್ಣ ಹೇಳಿದ "ಅಗಸ ನೀರಡಸಿದಂತೆ" ಆಗಿತ್ತು. ಅಂತೂ ನಂಗೆ ಯಾಕಾದ್ರು ಇರಲಿ ಅಂತ ಸ್ವಲ್ಪ ಜಾಸ್ತಿ ಕರೆನ್ಸಿ ಹಾಕೋ ಅಭ್ಯಾಸ ಆವತ್ತು ಒಳ್ಳೆ ರೀತಿಯಲ್ಲಿ ಉಪಯೋಗಕ್ಕೆ ಬಂತು. ಹೇಗೂ ಮಾತನಾಡಿ ಸಮಯ ಕಳೆದೆ. ಅಮ್ಮನಿಗೆ ಅಳು ಬರ್ತಾ ಇತ್ತು . ಅಲ್ಲೂ ನನ್ನ ಕೆಲವು ತರ್ಲೆ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿದ್ದರು.  ಅಮ್ಮನಿಗೆ ಕಾಡಿ ಕಾಡಿ   ಅಡುಗೆ ಬರೆದುಕೊಂಡ ಪುಸ್ತಕ ನನ್ನ ಜೊತೆ ಬರದೆ ಹಿಂದೆ ಉಳಿಯಿತು. ಅಲ್ಲೇ ಕೂತು ಮತ್ತೆ  ಅಮ್ಮನಿಂದ ಕೆಲ ಮುಖ್ಯ ಅಡುಗೆಗಳನ್ನು ಅಲ್ಲೇ ಕೇಳಿಬರಕೊಂಡೆ. ಅಂದ ಹಾಗೆ ಮುಖ್ಯ ಅಡುಗೆ ಏನು ಗೊತ್ತಾ ಅನ್ನ ಮಾಡೋದು ಹೇಗೆ ಎಷ್ಟು ನೀರು ಹಾಕಬೇಕು.  ... ಎಷ್ಟು ಹೊತ್ತು ಬೇಯಿಸ ಬೇಕು ಹೀಗೆ . ಕೆಲ ಸಾಂಬಾರು ಮಾಡುವ ವಿಧಾನ , ಪಲ್ಯಗಳು ಎಲ್ಲಾ ಕೇಳಿ ಬರೆದು ಕೊಂಡೆ .
       ಹಾಗೂ ಹೀಗೂ ೨ ಗಂಟೆ ಅಂದು ೩ ಗಂಟೆ  ಬಿಟ್ಟು ಹೇಗೂ ವಿಮಾನ ಬಂದು ನಿಂತಾಗ ಅಯ್ಯಬ್ಬಾ ಒಮ್ಮೆ ಈ ಬಂಧಿಖಾನೆಯಿಂದ ಹೊರಬೀಳುವೆನೆಂದು ನೆಮ್ಮದಿ ಆಯಿತು. ಫ್ಲೈಟ್ ಬಂದ  ಕೂಡಲೇ ಹತ್ತೋಕೆ ಬಿಡೋಡಿಲ್ವೆ ನಮ್ಮನ್ನ . ಅದಿಕ್ಕೆ ನಮ್ ಸರಂಜಾಮ್ , ಆಹಾರ ಎಲ್ಲ ತುಂಬುತ್ತಿದ್ದಾಗಲೇ ಅಲ್ಲಿವರೆಗೆ ಇಲ್ಲದ ಮಳೆ ಧೋ ಎಂದು ಮತ್ತೆ ಸುರಿಯೋಕೆ ಶುರು. ನನಗಂತೂ ಏನು ಮಾಡೋಕೆ ಏನು ಹೇಳೋಕು  ಆಗದೆ ಸುಮ್ಮನಾದೆ . ಆ ಸಮಯದಲ್ಲಿ ನಮ್ಮ ವಿಮಾನ ನಿಲ್ದಾಣದಲ್ಲಿ ವಿಮಾನದ ಬಾಗಿಲಿನ ವರೆಗೂ ಸುರಂಗ ಮಾರ್ಗ ಅಳವಡಿಸುವ ಪದ್ಧತಿ ಇರಲಿಲ್ಲ. ವಿಮಾನದ ವರೆಗೂ ನಡೆದು ಕೊಂಡೇ  ಹೋಗಬೇಕು. ನಡೆಯೋದು ಸಮಸ್ಯೆ ಅಲ್ಲ, ಆದರೆ ಗಾಳಿ ಮಳೆ ಹುಚ್ಚು ಕಟ್ಟಿ ಸುರಿತ ಇತ್ತು.
       ಸ್ವಲ್ಪನಾದ್ರು ಕಮ್ಮಿ ಆಗಲಿ ಅಂತ ಕೊನೆ ಕೊನೆಗೆ ಸರತಿ ಸಾಲಿನಲ್ಲಿ ನಿಂತೆ. ಉಹು ಸ್ವಲ್ಪ ಕಮ್ಮಿ ಆಗೋ ಬದಲು ಜಾಸ್ತಿನೇ  ಆಯಿತು. ನಮಗೆ ವೈಟಿಂಗ್  ರೂಂನಿಂದ ಹೊರಬಂದು ವಿಮಾನದವರೆಗೆ ಹೋಗಲು ದೊಡ್ಡ ಒಂದು ಛತ್ರಿ ಕೊಡುತ್ತಿದ್ದರು. ಆದರೆ ಛತ್ರಿಗಳ ಸಂಖ್ಯೆ ಕಮ್ಮಿ ಇದ್ದುದರಿಂದ ಒಂದು ಛತ್ರಿಯಲ್ಲಿ ೨ ಜನ ಹೋಗಬೇಕಿತ್ತು. ನಾನು ಅಲ್ಲು ಗಲಾಟೆ ಮಾಡಿ ಒಂದು ಛತ್ರಿಯಲ್ಲಿ ಒಬ್ಬಳೇ ಹೋದೆ. ನಮ್ಮ ಮಂಗಳೂರು ವಿಮಾನ ನಿಲ್ದಾಣ ಬೆಟ್ಟದ ಮೇಲೆ! ಸುಯ್ ಸುಯ್  ಗಾಳಿ ಬೀಸುತ್ತಿತ್ತು , ಮಳೆ ಸುರಿಯುತ್ತಿತ್ತು. ಅಯ್ಯೋ ಎಡಗಡೆ ಯಿಂದ  ಗಾಳಿ  ಇದೆ ಎಂದು ಆ ಕಡೆ ಛತ್ರಿ ಹಿಡಿದರೆ ಬಲಗಡೆಯಿಂದ ಗಾಳಿ  ಬೀಸುತ್ತಿತ್ತು.  ಮಗ್ಗುಲು ಬದಲಿಸುವಷ್ಟರಲ್ಲಿ ವಿರುದ್ದ ದಿಕ್ಕಿಂದ ಗಾಳಿ ಅದ್ರ ಜೊತೆ ಮಳೆ ಬಂದು ೧ ನಿಮಿಷದಲ್ಲಿ ನನ್ನ ಪೂರ ತೋಯಿಸಿ ಬಿಟ್ಟಿತು. ಪೂರಾ ಒದ್ದೆ ಗಾಳಿಯ ಹೊಯ್ದಾಟಕ್ಕೆ  ಬೇಗ ಬೇಗ ಹೆಜ್ಜೆ ಹಾಕಲೂ ಆಗದು. ಅಲ್ಲೂ ನಂಗೆ ಅಮ್ಮನಿಗೆ ಟಾಟಾ  ಮಾಡುವ ಅದಮ್ಯ ಹಂಬಲ ! ಹಿಂದೆ ತಿರುಗಿ ಕೈ ಬೀಸಿದೆ. ಅಂತೂ ಹರಸಾಹಸ ಮಾಡಿ ಮೆಟ್ಟಿಲು ಹತ್ತಿ ಬಾಗಿಲಿನ ಬಳಿ  ಬಂದಾಗ  ಬಟ್ಟೆಯಿಂದ , ಮೈ ಯಿಂದ ನೀರು ತೊಟ್ಟಿಕ್ಕುತ್ತಿತ್ತು. ಛತ್ರಿ ಮಡಿಸಿ ಅಲ್ಲೇ ಇದ್ದ ಬುಟ್ಟಿಗೆ ಹಾಕಿ ಅಲ್ಲಿಂದ ನನ್ನ ಬಟ್ಟೆ ಹಿಂಡುವ ಹೊಸ ಕೈಂಕರ್ಯ ಶುರು! ಸೆಲ್ವಾರ್ ಟಾಪ್, ವೇಲ್ ಎಲ್ಲ ಹಿಂಡಿ ಹಿಂಡಿ  ಇಟ್ಟೆ  ನೀರು  ಇಳಿ ತಾನೇ  ಇದೆ.  ಇನ್ನು ಎಷ್ಟು ಹೊತ್ತು ಹೀಗೆ ನಿಲ್ಲೋದು ಅಂದು  ಹೋಗಿ ಸೀಟ್ ನಲ್ಲಿ  ಕೂತು , ಮತ್ತೆ ಅಮ್ಮನಿಗೆ ಫೋನ್ ! ಅಮ್ಮ ನನ್ನ ಕಳುಹಿಸಿದ ದುಃಖದ ನಡುವೆಯೂ ನಿನ್ನ ಅಷ್ಟು ಕಷ್ಟ ಪಟ್ಟು ಬೆಳೆಸಿದಕ್ಕೆ ಸಾರ್ಥಕ ಕಣೆ ! ಆ ಮಳೆಯಲ್ಲಿ ಮತ್ತೆ ಹಿಂದೆ ತಿರುಗಿ ಟಾಟಾ ಹೇಳಿದ್ದು  ಕಂಡು ನನಗೆ ಮನಸ್ಸು ತುಂಬಿ ಬಂತು. ಎಂದಾಗ ನಾನು ಮಳೆಯಲ್ಲಿ ತೊಯ್ದಿದ್ದೆಲ್ಲಾ ಮರೆತೇ ಹೋಯಿತು .
       ಗಗನ ಸಖಿ ಒಂದಿಷ್ಟು ಸುರಕ್ಷತಾ ಕ್ರಮಗಳ ಪ್ರಾತ್ಯಕ್ಷಿಕೆ ನೀಡಿ ತೋರಿಸಿದ್ದಾಯಿತು. ಸುಮ್ನೆ ನೋಡಿ ಕೂತೆ ನಂಗೆ ಆಗ  ಯಾವ ಭಯವೂ ಇರಲಿಲ್ಲ. ಬಟ್ಟೆ ಒದ್ದೆ ಆಗಿ ಚಳಿ ಆಗುತ್ತಿತ್ತು ಅಷ್ಟೇ. ಬಟ್ಟೆ ಬದಲಿಸೋಣ ಅಂದ್ರೆ ಎಲ್ಲಿ ಬದಲಾಯಿಸೋದು ? ಗಗನ ಸಖಿಯನ್ನು ಕೇಳಿದೆ ಬಟ್ಟೆ ಇದ್ರೆ ಹಿಡ್ಕೊಂಡು ಬನ್ನಿ ಅಂದಳು ಆದರೆ ಒದ್ದೆ ಬಟ್ಟೆ ಹಾಕೋಕೆ ನನ್ನ ಬಳಿ  ಪ್ಲಾಸ್ಟಿಕ್ ಕವರ್  ಇರಲಿಲ್ಲ.  ಹೀಗಾಗಿ ಸುಮ್ಮನೆ ಕೂತು ಬಿಟ್ಟೆ. ನಂಗೆ ಸಿಕ್ಕಿದ್ದು ವಿಮಾನದ ರೆಕ್ಕೆಯ ಭಾಗದ ಸೀಟ್ ! ಏನು ಮೋಡವೋ  ಏನು ದೃಶ್ಯವೋ ನಂಗೆ ಏನು ಕಾಣಲಿಲ್ಲ :( ಆದರೆ ಚಳಿಯಲ್ಲಿ ಮಾತ್ರ ನಡುಗಿ ಹೋದೆ ಆ ಎ. ಸಿ . ದೇವಾ ಕೈ ಕಾಲು  ಮರಗಟ್ಟಿ ಹೋಯಿತು. ಎಲ್ಲರದು ಒಂದೇ ಅವಸ್ಥೆ !
        ಸುಮಾರು ೩. ೩೦ ಘಂಟೆಯ ಪ್ರಯಾಣದ ಬಳಿಕ ಮರುಭೂಮಿಗೆ ಪಾದಾರ್ಪಣೆ ಮಾಡಿದೆ. ಮರು ಭೂಮಿಯ ಸೆಕೆ ಕಂಡು ತತ್ತರಿಸಿದೆ. ಕಾದ ಕಾವಲಿಗೆ ಕಾಲಿಟ್ಟಂತೆ  !  ಊರಿನಲ್ಲಿ ಎಂಥಾ  ಗಾಳಿ ಮಳೆ. ಇಲ್ಲಿ ಸುಡು ಬೇಸಿಗೆ ! ಪ್ರಕೃತಿಯ ಬಹುರೂಪ ಕಂಡು ದಂಗಾದೆ  .ಆಗ ಸಮಯ ಸುಮಾರು 5 ಘಂಟೆ ಸಮಯ ಆದರೆ ನಂಗೆ ಯಾಕೋ ಮಧ್ಯಾಹ್ನ 12 -1  ಗಂಟೆಯ ಅನುಭವ. ಬಿಸಿಲ ಝಳ ಹಾಗಿತ್ತು. ನೆಲವೂ ಸುಡುತ್ತಿತ್ತು ಭಾನು ಕೆಂಡ ಕಾರುತ್ತಿದ್ದ , ವಾಯು ದೇವನೂ ಬಿಸಿಯಾಗಿ ಬುಸುಬುಸು ಹೇಳುತ್ತಿದ್ದ.   ಒಟ್ಟಾರೆ "ನರಕ" ಎಂಬ  ಒಂದು ಪರಿಕಲ್ಪನೆ ಇದ್ರೆ ಅದು ಇದೇ ಅಂತ  ಅನ್ನಿಸೋಕೆ ಶುರು. 2 ನಿಮಿಷದಲ್ಲಿ ಓಡಿ  ಬಂದು ನಮ್ಮನ್ನು ಹೊತ್ತೊಯ್ಯಲು ಸಿದ್ದವಾದ  ಬಸ್ ಸೇರಿಕೊಂಡೆ. ಆ ಬಸ್ ನಿಂದ ಹಿಡಿದು ಎಲ್ಲಾ  ಕಡೆ ಹವಾನಿಯಂತ್ರಣ ವ್ಯವಸ್ಥೆ ಇತ್ತು. ಅಂತೂ ಸೌಖ್ಯವಾಗಿ ಮೊದಲ ವಿಮಾನಯಾನ ಮಾಡಿಬಿಟ್ಟೆ.
         ಬಹುಶಃ ಅದೇ ಮೊದಲ ಮತ್ತು ಕೊನೆಯ ನನ್ನ ಜೀವಮಾನದ ಅತ್ಯಂತ ಸುಖೀ ವಿಮಾನಯಾನ ಅಂತ ಆಗ ಗೊತ್ತಿರಲಿಲ್ಲ.2010  ರ ಮಂಗಳೂರು ವಿಮಾನ ದುರಂತ ದೂರದರ್ಶನದಲ್ಲಿ ಕಂಡ ಮೇಲೆ ನನ್ನ ವರ್ತನೆಯೇ ಬದಲಾಗಿ ಹೋಯಿತು . ಈ ಘಟನೆಯ ಬಳಿಕ 10  ದಿನಗಳಲ್ಲಿ  ಭಾರತಕ್ಕೆ ಬರುವುದೆಂದು ಕೊನೆಕ್ಷಣದಲ್ಲಿ ನಿರ್ಧಾರವಾಗಿತ್ತು. ಅಲ್ಲಿಗೆ ನಾನು ಪೂರ ಮರ ಕಟ್ಟಿ ಹೋದೆ . ನಾನು ಇನ್ನು ವಿಮಾನ ಹತ್ತೋದೇ ಇಲ್ಲ ನಂಗೆ ಭಾರತವೂ ಬೇಡ ಏನೂ ಬೇಡ.  ನಾನು ಇಲ್ಲೇ ಮರುಭೂಮಿಯಲ್ಲಿ ಸತ್ತರೂ ಅಡ್ಡಿ ಇಲ್ಲ ಆದರೆ ಆ ವಿಮಾನದಲ್ಲಿ ಬೆಂದು ಸಾಯೋ  ಕಷ್ಟ ನಂಗೆ ಬೇಡವೇ ಬೇಡ ಎಂದು ಹಠ ಹಿಡಿದೆ. 
            ಅಯ್ಯೋ ಹೀಗಂದರೆ ಹೇಗೆ ಅಂತ ನನ್ನ "ಮನೆ ದೇವರ" ಸಂತೈಕೆ. ಸರಿ!! ಎಲ್ಲ ಫ್ಲೈಟ್ ಬೀಳೋಲ್ಲ. ಏನು ಆಗೋಲ್ಲ ಅಮ್ಮ ನಿನ್ನ ನೋಡೋಕೆ ಕಾಯ್ತಾ ಇರ್ತಾರೆ ಅಂತ ಹೇಳಿದಾಗ - ಅಮ್ಮ !!! ಹೌದು ಅಮ್ಮನನ್ನು ನೋಡ್ಬೇಕು ಅನ್ನೋ ಹಂಬಲ ಶುರು ! ಆದರೆ ನಾನು ಆ ಮಂಗಳೂರು ಟೇಬಲ್ ಟಾಪ್ ಏರ್ ಪೋರ್ಟ್ ಗೆ ಬರೋಲ್ಲ ಮತ್ತು ಬೇರೆ ಫ್ಲೈಟ್ ನಲ್ಲಿ ಹೋಗೋಣ ಆ ಏರ್ ಇಂಡಿಯಾ  ಎಕ್ಸ್ ಪ್ರೆಸ್ ಬೇಡವೇ ಬೇಡ ಎಂದು ಪಟ್ಟು ಹಿಡಿದೆ  , ಯಾವುದಾದರೂ ಏರ್ ಪೋರ್ಟ್ ಗೆ ಹೊತ್ತು ಹಾಕಿ ಅಂದು ಕೂತೆ. ಕೊನೆಗೆ ಬೆಂಗಳೂರು  "ದೇವನ ಹಳ್ಳಿ" ಏರ್ ಪೋರ್ಟ್ ಗೆ ಎಮಿರೇಟ್ಸ್ ನಲ್ಲಿ ಟಿಕೆಟ್ ಸಿಗದೇ ಒಲ್ಲದ ಮನಸ್ಸಿಂದ  ಏರ್ ಅರೇಬಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದೆ. ಆದರೆ ಈ ಬಾರಿ ವಿಮಾನ ಹತ್ತುವಾಗಲೇ ನನ್ನ ಕೈ ಕಾಲು ಥರ ಥರ ! ಜೊತೆಯಲ್ಲಿ ನನ್ನ ಪತಿರಾಯ ಇದ್ದಿದ್ದಕ್ಕೆ ಬಂದೆ , ಇಲ್ಲಾಂದ್ರೆ ವಾಪಾಸ್ ಓಡಿ  ಮನೆಗೆ ಹೋಗಿ ಬಿಡ್ತಾ ಇದ್ನೋ ಏನೋ ಗೊತ್ತಿಲ್ಲ ಆ ಪರಿ ಗುಬ್ಬಚ್ಚಿ ಯಂತಾಗಿ  ಬೆದರಿದ್ದೆ. ಕೊನೆ ಗಳಿಗೆಯಲ್ಲಿ ವಿಮಾನದ ಮೆಟ್ಟಿಲು ಹತ್ತುವಾಗ ನನ್ನ ಎಳೆದುಕೊಂಡೆ ಹತ್ತಿ  ಹೋಗಿದ್ದು. 100 ಸಲ ಕೇಳಿದ್ನೋ  ಏನೋ "ಪುಟ್ಟಾ ಫ್ಲೈಟ್ ಬೀಳೋಲ್ಲ ಅಲ್ವಾ ನಾವು ಸಾಯೊಲ್ಲ  ಅಲ್ವಾ?" ಅದು ರಾತ್ರಿ 11 ರ ಫ್ಲೈಟ್. ಅಂತೂ ನನ್ನ ಎಳೆದುಕೊಂಡು  ತಂದು ಬಿಟ್ಟ ಮೇಲೆ ಸೀಟ್ ನಲ್ಲಿ  ಕುಳಿತು ಕೊಳ್ಳೋಕೆ ಮುಂಚೆ ನನ್ನ ಸಮೀಕ್ಷೆ ಶುರು . ನನ್ನ ಸೀಟ್ "ತುರ್ತು ನಿರ್ಗಮನ ದ್ವಾರ" ದಿಂದ ಎಷ್ಟು ಸೀಟ್ ನ  ಅಂತರದಲ್ಲಿದೆ  ಮೂರು ಮೂರು  ಸಲ ಲೆಕ್ಕ ಹಾಕಿ ಮನನ ಮಾಡಿಕೊಂಡು ಅಂತೂ ಕೂತೆ . ಈ ಬಾರಿಯೂ ಸಿಕ್ಕಿದ್ದು ಅದೇ ಸೀಟ್ ವಿಮಾನದ ರೆಕ್ಕೆಯ ಸೀಟ್  ಹೊರಗೆ  ಏನು ಕಾಣದು ಸಾಲದ್ದಕ್ಕೆ ರಾತ್ರಿ.  ಗಗನ ಸಖಿ ಸೀಟ್ ಬೆಲ್ಟ್ ಹಾಕಿ ಅಂದಾಗ ಹಾಕಿ, ಅವಳು ಆಚೆ ಹೋದ ತಕ್ಷಣ ಕಳಚಿ ಕೂತು ಬಿಟ್ಟೆ ! ಎಲ್ಲಾದರೂ ಫ್ಲೈಟ್ ಬೀಳೋದೇ ಆದರೆ ನನ್ನ ಸುರಕ್ಷತಾ  ಕ್ರಮವನ್ನು  ಕೈಕೊಂಡದ್ದು ಹೀಗೆ! ಅಷ್ಟರಲ್ಲಿ ಒಂದು ಪ್ರಕಟಣೆ "ಮಸ್ಕತ್ ನಲ್ಲಿ ಒತ್ತಡ ಕಮ್ಮಿ ಇರುವುದರಿಂದ ನಮ್ಮ ವಿಮಾನ ತಡವಾಗಿ ಹೊರಡುವುದು ಹೀಗಾಗಿ  ಎಲ್ಲರೂ ಸಹಕರಿಸ ಬೇಕಾಗಿ ವಿನಂತಿ ... " ಭಗವಂತಾ ಹೊರಟ  ಸರಿ ಗಳಿಗೆಯೇ  ಇಲ್ಲ ! ಬರೋಬ್ಬರಿ ೨ ಘಂಟೆ ವಿಮಾನದ ಒಳಗೆ ಬಂಧಿಸಲ್ಪಟ್ಟೆವು . ಎಲ್ಲ ಆರಾಮಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದರೂ ,  ನಾನು ಒಂದು ಕ್ಷಣ ಕಣ್ಣು ಮುಚ್ಚಿದ್ದರೆ ಕೇಳಿ ! ಅಂತೂ  ರಾತ್ರಿ 1  ಘಂಟೆಗೆ ವಿಮಾನ ರನ್ ವೇ ಬಿಟ್ಟು ಹಾರಿತು. ಜೀವ ಬಾಯಿಗೆ ಬಂದು ಕೂತಿತು. ಹೀಗೆ ಚಡಪಡಿಸುತ್ತಾ ಇದ್ದ ನನ್ನ ಕಂಡು ಗಗನಸಖಿ ಯೊಬ್ಬಳು ಏನು ಸಮಸ್ಯೆ ಎಂದು ಕೇಳಿ ಎಲ್ಲ ಮಾಡಿದ್ದೂ ಆಯಿತು ನಾನು ಚಡ ಪಡಿಸ್ತಾನೆ ಇದ್ದೆ.   ಕೊನೆಗೆ ಹೇಳಿದೆ ನಂಗೆ ಸಿಕ್ಕಾ ಪಟ್ಟೇ ಭಯ! ನನ್ನ ಏನು ಕೇಳೋಕೆ ಬರಬೇಡಿ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ ಅಂತ ಹೇಳಿದ ಮೇಲೆ ಸುಮ್ಮನೆ ಹೋದಳು. ಈ ಏರ್ ಅರೇಬಿಯಾ ಸಿಕ್ಕಾಪಟ್ಟೆ ಹೊಯ್ದಾಟ  ಮಾಡಿದಂತೆ  ಇತ್ತಪ್ಪ ಆ ಸಲ. ಸಾಲದಕ್ಕೆ ನಾನು ಬೇರೆ ಕೂತಿದ್ದು ರೆಕ್ಕೆ ಪಕ್ಕ ಹೊರಗೆ ನೋಡಿದ್ರೆ ರೆಕ್ಕೆ ಗಡ  ಗಡ ಅಲುಗಾಡುತಿತ್ತು . ಇದನ್ನು ಕಂಡು ಇನ್ನಷ್ಟು ಗಾಬರಿ ಬಿದ್ದೆ  ಇಲ್ಲ ಇದು ಸಮುದ್ರ ನಡುವೆಯೇ ಬೀಳುತ್ತೆ ಅಂತ .  ಮಲಗಿದ್ದ ನನ್ನ ಪತಿರಾಯನನ್ನು ತಟ್ಟಿ  ತಟ್ಟಿ  ಎಬ್ಬಿಸಿ ಬಿಟ್ಟೆ.  ಅಯ್ಯೋ ದೇವರೇ .. ನಿನ್ನ ಭಯವೇ ಏನು ಆಗಲ್ಲ ಸ್ವಲ್ಪ ಸುಮ್ನೇ ಇರು . ಏನಾದರೂ ಆದರೆ ಒಟ್ಟಿಗೆ ಇದ್ದೇವೆ ಒಟ್ಟಿಗೆ ಹೋಗೋಣ ಅಂದಾಗ  ಇನ್ನಷ್ಟು ಭಯ ಆಗಿ ಪೂರಾ ಪೆಚ್ಚಾದೆ . ಅಂತೂ ಕೊನೆಗೆ ಬೆಂಗಳೂರು ಬಂತು ಅಂದಾಗ ಅಯ್ಯಬ್ಬಾ ಅನ್ನಿಸ್ತು . ಆದರೆ ಲ್ಯಾಂಡಿಂಗ್ ಸಮಯದಲ್ಲಿ ಸಿಕ್ಕಾಪಟ್ಟೆ  ಕಂಪಿಸಿದ ಪರಿಣಾಮವಾಗಿ ಭಯ ಬಿದ್ದು ಸಿಕ್ಕಾಪಟ್ಟೆ ಸುಸ್ತಾಗಿ ಜ್ವರ ಹೊತ್ತು ಬೆಂಗಳೂರಿಗೆ ಸೇರಿಕೊಂಡೆ . 
            ೨೦ ದಿನ ರಜೆ ಮುಗಿಸಿ ಹಿಂದೆ ಹೊರಡುವಾಗ ಮತ್ತೆ ಮಂಗಳೂರು ಏರ್ ಪೋರ್ಟ್ ಬೇಡ ಎಂದು  ಹಠ ಹಿಡಿದೆ . ಆದರೆ ನಾನಾ ಪತಿ ಅದನ್ನು  ಕಿವಿಗೆ ಹಾಕಿ ಕೊಳ್ಳದೆ , ಕಿಂಗ್ ಫಿಷರ್ ನಲ್ಲಿ ಟಿಕೆಟ್ ಮಾಡಿ ಆಗಿತ್ತು. ಇಲ್ಲಿ ಇಳಿವಾಗ ಬಿದ್ದಿದು ಮೇಲೆ ಹಾರುವಾಗ ಅಲ್ಲ ಸ್ವಲ್ಪ ಸುಮ್ನೆ ಇರು . ಅಷ್ಟು ನಿನ್ನ ಸರಂಜಾಮ್  ಹೊತ್ತು ಬೆಂಗಳೂರಿಗೆ ಬರೋಕೆ ನಂಗೆ ಸಾಧ್ಯ ಇಲ್ಲ . ಇಷ್ಟ ಇದ್ರೆ ಬಾ ಇಲ್ಲಾಂದ್ರೆ ನೀನು  ಒಬ್ಬಳೇ ಬೆಂಗಳೂರಿಗೆ ಹೋಗು ಅಲ್ಲಿಂದ ಬಾ ಅಂದ್ರು . ನಂಗೆ ಒಬ್ಬಳೇ ಹೋಗುವ ಧೈರ್ಯ ಆಗ ಇರಲಿಲ್ಲ . ಹೀಗಾಗಿ ಗಪ್  ಚುಪ್ ಬಾಯಿ ಮುಚ್ಚಿ ಬಾಲದಂತೆ ಹಿಂಬಾಲಿಸಿ ಬಂದೆ . ಆದರೆ ಕಿಂಗ್ ಫಿಷರ್ ನಲ್ಲಿ ಅಷ್ಟು ಭಯ ಆಗಲಿಲ್ಲ. ಲ್ಯಾಂಡಿಂಗ್ ಅಂತೂ ಗೊತ್ತೇ  ಆಗಲಿಲ್ಲ ಅನ್ನೋ ಥರ ಇತ್ತು .
           ಮೂರನೇ ಸಲ ಅನಿವಾರ್ಯವಾಗಿ ಒಬ್ಬಳೇ ಬರಬೇಕಿತ್ತು.  ಆ ಸಲ ನಂಗೆ ಬೆಂಗಳೂರಿಗೆ  ಬಂದು ಅಲ್ಲಿಂದ ಕನೆಕ್ಟಿಂಗ್  ಫ್ಲೈಟ್ ಆ ರಗಳೆ ಬೇಡ ಅನ್ನಿಸಿತ್ತು . ಅಲ್ಲಿಗೆ ಉಳಿದ ದಾರಿ ಮತ್ತೆ ಅದೇ ಟೇಬಲ್ ಟಾಪ್ ಮಂಗಳೂರು ವಿಮಾನ ನಿಲ್ದಾಣ . ಅದೂ ರಾತ್ರಿ ಫ್ಲೈಟ್ ನಂಗೆ ಬೇರೆ ಯಾವ ಆಯ್ಕೆ ಇರಲಿಲ್ಲ . ಬರದೆ ಇರೋಕೆ ಸಾಧ್ಯ ಇಲ್ಲ. ಅಂತೂ ಆಗಿದ್ದು ಆಗಲಿ ಅಂತ ಇದ್ದ ಎಲ್ಲಾ ದೇವರ ಸಹಸ್ರನಾಮ ಎಂಪಿ 3  ಗೆ ಹಾಕಿಕೊಂಡು ಹೊರಟು  ಬಂದೆ. ಆದರೂ ಮೈಎಲ್ಲ ತಣ್ಣಗೆ ತಣ್ಣಗೆ ! ಆದರೆ ಏರ್ ಪೋರ್ಟ್ ಒಳಹೊಕ್ಕು ಸರಂಜಾಮು ಪರಿಶೀಲಿಸಿ, ನನ್ನ ಪರಿಶೀಲಿಸುವಾಗ ಅದೊಂದು ಮೆಟಲ್ ಡಿಟೆಕ್ಟರ್ ಕೀ ಕೀ ಎಂದು ಶಬ್ದ ಮಾಡಿ ನನ್ನ ಜನ್ಮ ಜಾಲಾಡಿ  ಬಿಟ್ರು. ಕೈಯಿಂದ ತೆಗೆಯಲು ಬಾರದ ಬಳೆ ಕಾಲಿಂದ ತೆಗೆಯಲು ಬಾರದ ಕಾಲುಂಗುರ, ಕಾಲು ಗೆಜ್ಜೆ ! ಅಂತೂ ಕೈ ಇಂದ ಬಳೆ  ತೆಗೆಯುವಾಗ ಚರ್ಮ ಕಿತ್ತು ಬಂದು ಕೈಯೆಲ್ಲ ಓಕುಳಿ ! ಅಂತೂ  ರಕ್ತ ಕಂಡು ಹೆದರಿದ ಅಧಿಕಾರಿಗಳು ಕೀ ಕೀ ಶಬ್ದ ಬರ್ತಿದ್ದ ಹಾಗೆ ನನ್ನ ಮುಂದೆ ಸಾಗಿಸಿ ಬಿಟ್ರು. ಅಲ್ಲಿಂದ ನನ್ನ ಪ್ರಥಮ ಚಿಕಿತ್ಸೆ ಶುರು ಮಾಡಿ ಕೊಂಡೆ ಅಯ್ಯಬ್ಬಾ  ಏನು ಉರಿ! 
            ಆ ಸಲ ವಿಮಾನ ಸಮಯಕ್ಕೆ ಸರಿಯಾಗಿ ಬಂದು  ಹತ್ತಿ ಕೂತೆ. ನನ್ನ ಬಿಡದೆ ತನ್ನಲ್ಲೇ ಉಳಿಸಿಕೊಳ್ಳುವ ಆ ರೆಕ್ಕೆ ಬದಿಯ ಸೀಟ್ ನನಗೆ ಎಂದಿನಂತೆ ಸ್ವಾಗತ...  ಸುಸ್ವಾಗತ ಬಯಸಿದ್ದು ನಿಜಕ್ಕೂ ಬೇಸರ ಮೂಡಿಸಿತ್ತು.  ಆದರೂ ನನ್ನ ಕರ್ತವ್ಯವನ್ನು  ಬಿಡಲೇ ಇಲ್ಲ ತುರ್ತು ನಿರ್ಗಮನ ಎಷ್ಟು ದೂರಕ್ಕೆ ಇದೆ ಎಂದು ಲೆಕ್ಕ ಹಾಕಿ ಮನದಟ್ಟು ಮಾಡಿ ಕೂತೆ. ಸರಿ ಇನ್ನು ಸಹಸ್ರನಾಮ ಕೇಳೋಣ ಅಂತ ಯೋಚಿಸಿ ಇಯರ್ ಫೋನ್ ಕಿವಿಗೆ ಇಟ್ಟ ಮೇಲೆ ಗೊತ್ತು ನಂಗೆ ಅದ್ರಲ್ಲಿ ಚಾರ್ಜ್ ಇರಲೇ ಇಲ್ಲ . ಏನು ಮಾಡೋದು ಸುಮ್ಮನೆ ಬ್ಯಾಗ್ ಒಳಗೆ ಇಟ್ಟು ಕೂತು ಮತ್ತೆ ಅದೇ ಚಡಪಡಿಕೆ . ಕಾಟಾಚಾರಕ್ಕೆ ಒಂದು ಸೀಟ್ ಬೆಲ್ಟ್ ಸಖಿ  ಆಚೆ ಹೋದ ಕೂಡ್ಲೇ ಕಿತ್ತು ಹಾಕಿ ಮುದುರಿ ಕೂತೆ. ಎಲ್ಲ ನಿದ್ರೆ ಮಾಡಿದರೆ ನಾನು ಒಮ್ಮೆಯಾವಾಗ ನಾನು ತಾಯ್ನಾಡಿಗೆ ಚರಣ  ಸ್ಪರ್ಶ  ಮಾಡಿ ಬದುಕಿ ಬಿಡುವೆ ಅಂತ ಕಾದು  ಕೂತೆ. ನಂಗೆ ಕ್ಷಣವೊಂದು ಕಳೆಯೋದು  ಯುಗ ಕಳೆದಂತೆ ಭಾಸವಾಗತೊಡಗಿತು.  
        ಅಂತೂ ಬೆಳಗ್ಗಿನ ಜಾವ ೬ ಘಂಟೆಗೆ ಟೇಬಲ್ ಟಾಪ್ ರನ್ ವೇ ಯಲ್ಲಿ ದುರಂತದ ಬಳಿಕ ನಾನು ಮೊದಲಬಾರಿಗೆ ಇಳಿದೆ. ಅದೇ ಭಯ ಇನ್ನು ಸ್ವಲ್ಪ ಜಾಸ್ತಿ ಭಯ ಎಲ್ಲಾದ್ರೂ ಬಿದ್ದರೆ ಕಣಜಾರು ಕಣಿವೆಗೆ ಕಣ್ಣು ಮುಚ್ಚಿ , ಸೀಟ್ ಬೆಲ್ಟ್ ಕಿತ್ತು ಕೂತು  ಯಾವಾಗ  ನೆಮ್ಮದಿಯಾಗಿ ಫ್ಲೈಟ್ ಲ್ಯಾಂಡ್ ಆಗುತ್ತದೋ ಎಂದು ಕಾದೆ. ನನ್ನ ಪುಣ್ಯಕ್ಕೆ ಅಲ್ಲ ಅಲ್ಲ ನನ್ನ ಅಮ್ಮ ಪಪ್ಪನ ಪುಣ್ಯಕ್ಕೆ ಸರಿಯಾಗಿ ಲ್ಯಾಂಡ್ ಆಯಿತು . ಒಮ್ಮೆಗೆ ಬದುಕಿ ಉಳಿದೆ . ಇಳಿದು ನೋಡಿದರೆ ತಲೆ ಧಿಂ ಅಂತ ಆಯಿತು ನಿಜ ಅದು ಟೇಬಲ್ ಟಾಪ್ ಕೆಳಗೆ ಪ್ರಪಾತವೇ ! ನಾವೆಲ್ಲಾ ಇಳಿದು ಇದೇನು ನಮ್ಮನ್ನು ಗುಡ್ಡೆ ಮೇಲೆ ಇಳಿಸಿದ್ದಾರೆ ಅಂತ ನೋಡೋದು !. ಒಂದು ಸುರಂಗ( ಟನೆಲ್ ) ಅಳವಡಿಕೆ ಇಲ್ಲ, ಹೋಗಲಿ ನಮ್ಮನ್ನು ಹೊತ್ತೊಯಲು ಒಂದು ಬಸ್ ವ್ಯವಸ್ಥೆಯೂ ಇಲ್ಲ. ಒಮ್ಮೆಗೆ ಭಯವೂ ಆಯಿತು ಇದೆ ಏರ್ ಪೋರ್ಟ್ ಹೌದೋ ಅಲ್ವೋ ಅಂತ ! ಎಲ್ಲ ಮಾತನಾಡಿ ಕೊಳ್ಳೋಕೆ ಶುರು  ಉಂದು ದಾನಿ ನಮನ್ ಗುಡ್ಡೆಡ್  ಬುಡ್ನಿ  ನನ ದಾದ ಮಲ್ಪುನು ಒಡೆ  ಪೋಪುನು (ಇದು ಏನು ನಮ್ಮನ್ನು ಗುಡ್ಡದ ಮೇಲೆ ಇಳಿಸಿದ್ದು ಇನ್ನು ಏನು ಮಾಡೋದು ಎಲ್ಲಿಗೆ ಹೋಗೋದು ) ಅಂತ ಕೆಲವರು ಇನ್ನು ಕೆಲವರು ಒರ ಇಡೆಮುಟ ಮುಟ್ಟಾಯೇ ಅಥ ನನ ಎಂಚಾಡಲ  ನಮ್ಮ ಇಲ್ಲಗ್ ಪೋವೊಲಿ . (ಒಮ್ಮೆ ಇಲ್ಲಿವರೆಗೆ ಮುಟ್ಟಿಸಿದ ಅಲ್ವಾ ಇನ್ನು ಹೇಗಾದರೂ ನಮ್ಮ ಮನೆ ಸೇರಿಕೊಳ್ಳಬಹುದು) ಸುಮಾರು ೨೦ ನಿಮಿಷದ ಬಳಿಕ ಒಂದು ಬಸ್ಸು  ನಮ್ಮನ್ನು ಹೊತ್ತೊಯಲು ಬಂತು.  ಅಲ್ಲಿವರೆಗೆ  ನಮ್ಮನ್ನು ಯಾರೂ ಕೇಳುವವರು ಇರಲಿಲ್ಲ ಇದನ್ನು ಕಂಡು ನಿಜಕ್ಕೂ ನಮ್ಮ ದೇಶದ ವಿಮಾನ ನಿಲ್ದಾಣಗಳ ದುರವಸ್ಥೆಯೇ ಅಂತ ಬೇಸರವೂ ಆಯಿತು .ಬಂದ ಬಸ್ ಹತ್ತಿ  ಪ್ರಕ್ರಿಯೆ ಮುಗಿಸಿ ಅಂತೂ ಅಮ್ಮನ ಮನೆ ಸೇರಿದೆ . ತಿಂಗಳು ಕಳೆದು ಹಿಂತಿರುಗಿ ಬಂದಾಗ ಯಾಕೋ ತುಂಬ ಭಯ ಆಗಲಿಲ್ಲ.
         ಮತ್ತೆ ೨೦೧೨ ರ ನವೆಂಬರ್ ನಲ್ಲಿ ತುರ್ತು ಭೇಟಿ ಬರಲೇಬೇಕಿತ್ತು. ಸಮಯದ ಅಭಾವ ಹೀಗಾಗಿ ನನ್ನ ತಲೆಗೆ ಹೆಚ್ಚು ಯೋಚಿಸೋಕೆ ಸಮಯ ಇರಲಿಲ್ಲ. ಮೇಲಾಗಿ ಹಗಲು ಹೊತ್ತಿನ ವಿಮಾನಯಾನ, ಸ್ವಲ್ಪ ಹಾಡುಗಳನ್ನು ಡೌನ್ ಲೋಡ್ ಮಾಡಿ ಒಯಿದಿದ್ದೆ. ಕೆಲ ಮ್ಯಾಗಜಿನ್ ಇಟ್ಟು ಕೊಂಡೆ. ಮತ್ತು ಏನೋ ಒಂದು ಸಮಾಧಾನ ನನ್ನ ಮನೆ ದೇವರು ಜೊತೆಯಲ್ಲೇ ಇದ್ದುದರಿಂದ ಸ್ವಲ್ಪ ನಿರಾಳ ! ಆದರೂ ತೆಪ್ಪಗೆ ಕೂರಲೇ ಇಲ್ಲ ಅತ್ತ ಓದಲೂ ಇಲ್ಲ . ಆದರೂ ಸ್ವಲ್ಪ ನಮ್ಮ "ಕನ್ನಡದ ಕೋಗಿಲೆ" ಛಾಯಾ ಹಾಡಿದ ಮೆಚ್ಚಿನ ಗೀತೆಯಾದ ದೇವ ನಿನ್ನ ಮಾಯೆಗಂಜಿ... ಬದುಕೇ ಅನಾಥ  ಬರಿದೇ ... ತೊರೆದು ಹೋಗದಿರೋ ಜೋಗಿ...  ಸ್ವಲ್ಪ ಸಮಾಧಾನ ನೀಡಿದುವು . ಅಂತೂ ಉಸ್ಸಪ್ಪಾ ...  ಸಂಜೆ ಇಳಿಹಗಲಿನ ಗೋಧೂಳಿ ಪುಣ್ಯ ಕಾಲದಲ್ಲಿ ಮತ್ತೊಮ್ಮೆ ತಾಯ್ನಾಡಿನ ನೆಲಮೆಟ್ಟಿದೆ. ಆದರೆ ಈ ಭಾರಿ ನಮ್ಮ ಮಂಗಳೂರು ವಿಮಾನ ನಿಲ್ದಾಣ ಬಹಳ ಸುಧಾರಣೆ ಕಂಡಿತ್ತು . ಇಳಿದ ಕೂಡಲೇ ಟನೆಲ್ ಅಳವಡಿಸಿ ಎಲ್ಲ ಸುಸೂತ್ರಗೊಳಿಸಿದ್ದರು.
      ನಾನು ಹೋಗಿದ್ದು ಕೇವಲ ೯ ದಿನಗಳಿಗಷ್ಟೇ ಅದು ೯ ಕ್ಷಣಗಳಂತೆ ಕಳೆದು ಹೋಗಿ ಮಾಡಬೇಕಾದ ಕೆಲವು ಕೆಲಸ ಬಾಕಿ ಉಳಿದು,  ಹೋಗಬೇಕಿದ್ದ , ಭೇಟಿಯಾಗಬೇಕಿದ್ದ ಕೆಲವು ವ್ಯಕ್ತಿಗಳನ್ನು ಭೇಟಿಮಾಡದೆ ಮತ್ತೆ ಹೊರಟು  ನಿಲ್ಲುವ ದಿನ ಬಂದಾಗ ಮನದಲ್ಲಿ ಮತ್ತದೇ ಬೇಸರ ... ಭಯ ಅಂತೂ ನನ್ನ ಬೆನ್ನು ಬಿಡದೆ ಕಾಡುವ ಪೆಡಂಭೂತ ! ಈ ಭಾರಿ ಭಾರತದಿಂದ ವಾಪಾಸು ಬರುವಾಗ  ಕೆಲ ಪುಸ್ತಕ ಹೊತ್ತು ತಂದಿದ್ದೆ. ಅದನ್ನು ಬಿಡಿಸಿ ನೋಡಿ ಓದುವುದರಲ್ಲಿ ಅಷ್ಟು ಭಯ ಕಾಡಲಿಲ್ಲ. ಆದರೆ ನಮ್ಮ ಏರ್ ಇಂಡಿಯಾ ಮರುಭೂಮಿ ತಲುಪಿದಾಗ ಇಳಿಯಲು ಕ್ಲಿಯರೆನ್ಸ್  ಸಿಗದ ಕಾರಣದಿಂದ ಸುಮಾರು ಒಂದೂವರೆ ಘಂಟೆಗಳ ಕಾಲ ಬಾನಂಗಳದಲ್ಲಿ ಹಾರಾಡಿದ್ದೇ  ಹಾರಾಡಿದ್ದು. ಆದರೆ ಈ ಸಮಯದಲ್ಲಿ ಪ್ರಯಾಣಿಕರ ಕಿವಿ ಮಾತ್ರ ನೋವಿನಿಂದ ಕಿತ್ತೇ  ಹೋಯಿತು. ನಾನು ಅಂತೂ ಗಳಗಳ ಅತ್ತು ಬಿಟ್ಟೆ ಯಾವ ಹತ್ತಿ ಉಂಡೆಯೂ ನೋವು ಕಮ್ಮಿ ಮಾಡಲಿಲ್ಲ.  ಅಸಾಧ್ಯ ಕಿವಿ ನೋವು ಇದುವರೆಗೊ ವಿಮಾನಯಾನದಲ್ಲಿ ನಾನು ಎಂದೂ ಅನುಭವಿಸಿಯೇ ಇಲ್ಲದ ಹೊಸ ಅನುಭವ , ಯಾತನೆ ! ಅದು ಕಮ್ಮಿಯಾಗೋಕೆ  ಸುಮಾರು ೧೦ ದಿನಗಳೇ ಬೇಕಾದುವು. ನೋವೇನೋ ಕಮ್ಮಿಯಾಯಿತು ಆದರೆ ನೆನಪು ಇನ್ನು ಹಸಿಯಾಗಿಯೇ ಇದೆ.
      ಮತ್ತೆ ಇವತ್ತು ಹೊರಟೆ ಅಮ್ಮನ ಮಡಿಲು ಸೇರುವ ಆಸೆ ! ಅದೇ ಫ್ಲೈಟ್ ,ಅದೇ ಏರ್ ಪೋರ್ಟ್ ... ಈ ಫ್ಲೈಟ್ ಫೋಬಿಯದ ಜೊತೆಗೆ ಕಿವಿನೋವಿನ ಭಯ ಇನ್ನೂ ಹೆಚ್ಚಾಗಿ ಕಾಡುತ್ತಾ ಇದೆ. ಈ ಬಾರಿ ಬಹಳ ಶೃದ್ದೆಯಿಂದ  ಕೆಲಪುಸ್ತಕ ಡೌನ್ ಲೋಡ್ ಮಾಡಿ ನನ್ನ ಮಡಿಲು ಗಣಕ ಜೊತೆಗೆ ಹೊತ್ತು ಒಯ್ಯುವ ಹುನ್ನಾರ ಹಾಕಿರುವೆ. ಒಂದು ರಾಶಿ ಒಳ್ಳೆ ಒಳ್ಳೆಯ ಹಾಡುಗಳು ಡೌನ್ ಲೋಡ್ ಮಾಡಿದ್ದೂ ಆಗಿದೆ. ಈ ಸರಿ ಒಂದು ಹೊಸ ಅನುಭವ! ಕೆಟ್ಟ ಸಮಯದಲ್ಲಿ ನನ್ನ ಫ್ಲೈಟ್ ಬೆಳಗ್ಗಿನ ಜಾವ ೪.೨೫ ಕ್ಕೆ  . ಅತ್ತ ರಾತ್ರಿಯೂ ಮಲಗೋಕೆ ಇಲ್ಲ. ಮಾರನೆ ದಿನ ನನ್ನ ಪತಿರಾಯನಿಗೆ ಕೆಲಸ ಇರುವ ಕಾರಣ ನನ್ನನ್ನು ತಡ ರಾತ್ರಿಯೇ ಏರ್ ಪೋರ್ಟ್ ಗೆ ಅಟ್ಟಿ , ಬಂದು ಅವರು ನಿದ್ರಾವಶರಾಗಿ  ಬಿಡುತ್ತಾರೆ. ಏನು ಮಾಡೋದು ಕಾಯಕವೇ ಕೈಲಾಸ . ನಂಗೆ ಸುಮಾರು ೪- ೫ ಪ್ರಹರಗಳ ಕಾಲ ಏರ್ ಪೋರ್ಟ್ ವಾಸ ಹಾಗೂ ೩. ೩೦ ಘಂಟೆ ವಿಮಾನದಲ್ಲಿ ಯಮ ಶಿಕ್ಷೆ ಇದೆ. ಅದಕ್ಕೆಂದೇ ಒಂದು ಡೈರಿ , ೨ ಪೆನ್ನು ಹಿಡಿದು ಏನಾದ್ರು ಗೀಚೋ ಹುನ್ನಾರ ಹಾಕಿಕೊಂಡಿರುವೆ . ಹಿಂದೆ ಬಂದಮೇಲೆ ಹೇಗೂ ನೀವೆಲ್ಲಾ ನನ್ನ ಕೊರೆತ ಓದೋಕೆ ಕಾಯುತ್ತಾ  ಇರುವಿರಿ ಎಂಬ ಭರವಸೆಯಲ್ಲಿ  ....
 ಬೇಗನೆ ಬರುವೆ ನೀವೆಲ್ಲಾ ಹಾರೈಸಿ ಬಿಡಿ .. ನಾ ಬೇಗ ಹಾರಿ ಹೋಗಿ ಮತ್ತೆ ನಿಮ್ಮ ಬಳಿಗೆ ಬರಲೇನು ? ?

6 comments:

ಮನಸು said...

ಏನು ಆಗೋಲ್ಲ ಬಿಡಿ ಶ್ರೀನಿ... ಆರಾಮಾಗಿ ಹೋಗಿ ಬನ್ನಿ... ರಜೆ ಚೆನ್ನಾಗಿ ಎಂಜಾಯ್ ಮಾಡಿ

ಪ್ರಕಾಶ್ ಶ್ರೀನಿವಾಸ್ said...

ಇಲ್ಲಿಂದ ವಿದೇಶದಲ್ಲಿ ಹೋಗಿ ಕೆಲಸ ಮಾಡೋ ಹೆಣ್ಣು ಮಕ್ಕಳ
ತಳಮಳ ಚೆನ್ನಾಗಿ ಬಂದಿದೆ ತುಂಬಾ ಹಿಡಿಸಿತು
..ಪ್ರಯಾಣ ಸುಖಮಯವಾಗಿರಲಿ

Unknown said...

nimma kate odutiddare.. 'pyar to hona hi tha' ilma na Kajol paristiti nenapige bartide..a modamodala ana yaanada avaantara chennagi moodibandide..

padmapani said...

banni banni,thaaynaadige.enoo thondaregalu aagalla.bangalore ge bandare namma manegoo bheti kodi

akshaya kanthabailu said...

ಚಂದ ಇದೆ ಬರೀತಿರಿ

Harini Narayan said...

ಹಾರುಹಕ್ಕಿಯಲ್ಲಿನ ಮೊದಲ ಪಯಣ ಚೆನ್ನಾಗಿದೆ :)