Wednesday, June 5, 2013

ಅಮ್ಮ ಸಾಕಿದ ನಂದಿನಿ ..

ಅಮ್ಮನಿಗೆ ಮದುವೆಯಾಗೋ ಮೊದಲಿಂದಲೂ ಹಸು, ಎಳೆ ಕರು ಕಂಡರೆ ತುಂಬಾ ಇಷ್ಟ. ಹೀಗಿದ್ದಾಗ ನಮ್ಮ ಅಜ್ಜನಿಗೆ ನೆರೆಮನೆಯವರು ಒಬ್ರು ಮಲ್ಲಿ ಎಂಬ ದನವನ್ನು ಎಳೆ ಕರುವಿನ ಜೊತೆ ''ಗೋದಾನ"ದ ರೂಪದಲ್ಲಿ ಕೊಟ್ಟರಂತೆ. ಆಗ ಈ ಕರು ಕೇವಲ ಹದಿನೈದು ದಿನಗಳ ಮುದ್ದು ಮುದ್ದು ಕರು. ಹೀಗೆ ನನ್ನ ಅಮ್ಮಮ್ಮನ ಮನೆಯ ಸಮೃದ್ದ ಕೊಟ್ಟಿಗೆ ಸೇರಿದ ಮುದ್ದು ಕರು ಎಲ್ಲ ಮುದ್ದಿನ ಕಣ್ಮಣಿ "ನಂದಿನಿ" ಯಾದಳು.
          ದಿನ ಕಳೆದಂತೆ ಬೆಳೆದ ನಂದಿನಿ ಬೆಳೆದು ಇಡೀ ಕೊಟ್ಟಿಗೆಯ ರಾಣಿಯಾದಳು. ಅಮ್ಮ ಯಾವಾಗಲೂ ಹೇಳುವ  ಮಾತು ನಂದಿನಿ ಒಂದು ಹಸುನಾ ?? ಉಹು೦ !!!  ಇಲ್ಲ ಅವಳು ಮನೆಯ ಒಬ್ಬ ಸದಸ್ಯೆ  ಹಾಗೆ ಇದ್ದಳು. ಅವಳಿಗೆ ಮಾತನಾಡಲು ಬಾಯಿ ಒಂದು ಬರ್ತಾ ಇರಲಿಲ್ಲ ಅನ್ನೋದು ಬಿಟ್ರೆ , ಉಳಿದಂತೆ  ಎಲ್ಲ ಗೊತ್ತಗ್ತಾ ಇತ್ತು.
            ಹಳ್ಳಿಯಲ್ಲಿ ದಿನ ಬೆಳಗಾದರೆ ಕಲಗಚ್ಚು ಬಿಸಿ ಮಾಡಿ ಅದಿಕ್ಕೆ ಹಿಂಡಿ  ಹಾಕಿ  ಕುಡಿಯಲು ಇಡುವುದು ರೂಢಿ . ಕೆಲದಿನ  ಬಾಯಿ ಚಪ್ಪರಿಸಿ ಕುಡಿದರೆ , ಇನ್ನು ಕೆಲವೊಮ್ಮೆ ಸುಮ್ಮಗೆ ಅಡ್ಡಹಾಕಿ  ತಳಭಾಗದಲ್ಲಿ ಉಳಿದ ಹಿಂಡಿ, ಅನ್ನವನ್ನು ತಿಂದು ಹೂ೦ ಗುಡಲು ಶುರುಮಾಡುತ್ತಾ ಇದ್ದಳು ನಮ್ಮ ನಂದಿನಿ . ಅದು ಇವತ್ತು ಅಕ್ಕಚ್ಚು ಸರಿ ಇಲ್ಲ ನ೦ಗೆ ನೀರೇ ಸಾಕು ಅನ್ನುವುದರ  ಮುನ್ಸೂಚನೆ. ಹೀಗೆ ಮಾಡಿದರೆ ಅವತ್ತು ಇಡೀ ದಿನ ನೀರೆ ಕುಡಿಯೋದು ನಮ್ಮ ನಂದಿನಿ . ಬಿಸಿಲಿಂದ ಬಳಲಿ ಬಂದರೂ ಉಹು ಅಕ್ಕಚ್ಚು ಮುಟ್ಟಲ್ಲ ಆದಿನ . ಅದು ಹೀಗಾಡಲು ಕಾರಣ ಹಲವು ಸ್ವಲ್ಪ ತಣ್ಣಗಾಗಿಯೂ ಇರಬಹುದು, ಹಿಂಡಿ ಸ್ವಲ್ಪ ಕಮ್ಮಿ  ಹಾಕಿರಬಹುದು .
           ಬೆಳಗ್ಗಿನ ಅಕ್ಕಚ್ಚು ಕುಡಿದ ಮೇಲೆ ಹಟ್ಟಿಯ ದನ ಕರುಗಳನ್ನುಮೇಯಲು ಹೊರಗೆ  ಕರೆದು ಕೊಂಡು  ಹೋಗುವುದು ರೂಢಿ . ಈ ನಂದಿನಿ ಹಟ್ಟಿಯಿಂದ ಮೊದಲು ಹೊರ ಹೋಗುವ  ದನವಾದರೂ ಅವಳು ಸರತಿಯ ಸಾಲಿನಲ್ಲಿ ಕೊನೆಗೆ ಹೋಗುವುದು. ಮೊದಲು ಅವಳ ಸಹಚರರು ಮೊದಲು ಹೋಗಬೇಕು ಅನ್ನುವುದು ಅವಳು ಇತರರಿಗೆ ಮಾಡಿದ ನಿಯಮ. ಅದನ್ನು ಉಳಿದ ಸದಸ್ಯರು ತಪ್ಪದೆ ಪಾಲಿಸುತ್ತಿದ್ದರು.  ಒಂದು ವೇಳೆ ಪಾಲಿಸದೆ ನಿಯಮ ಮುರಿದರೆ ಸುಮ್ಮನಿರೋ ಜಾತಿ ನಮ್ಮ ನಂದಿನಿ  ಅಲ್ಲ. ಬುಸುಗುಟ್ಟಿ ,ಹಾಯ್ದು  ಅವಳು ಹೇಳಿದಂತೆ ಕೇಳುವಂತೆ ಮಾಡುವ ಸರ್ವಾಧಿ ಕಾರಿಣಿ!
        ನಮ್ಮ ನಂದಿನಿ ಬರಿ ಸರ್ವಾಧಿಕಾರಿಣಿ ಮಾತ್ರ ಅಲ್ಲ , ಅವಳ ಜೊತೆ ಹಟ್ಟಿಯಲ್ಲಿ ಇದ್ದ ಎಲ್ಲರಿಗೂ ಆಕೆ ರಕ್ಷಣೆ ನೀಡುತ್ತಿದ್ದಳು. ಊರಿನ ಗುಡ್ಡ ಅಂದಮೇಲೆ ನಮ್ಮ ಮನೆಯ ಹಸು ಕರುಗಳಿಗೆ  ಮೀಸಲು ಅಲ್ಲ, ಅಲ್ಲಿ ಊರಿನ ಇತರ ಮನೆಯ ಕೊಟ್ಟಿಗೆ ಸದಸ್ಯರು ಬರುತ್ತಾರೆ. ಎಲ್ಲರೂ ನಮ್ಮ ನ೦ದಿನಿಯ ಹಾಗೆ ಶಿಸ್ತಿನ ಸಿಪಾಯಿಗಳು ಅಲ್ಲ. ಹಾಯೋದು , ಕೆನೆಯೋದು ಮಾಡಿ ಕೊಳ್ಳೋದು ಇದ್ದೆ ಇರುತ್ತೆ. ಜೀವ ಸರಪಣಿಯಲ್ಲಿ ಉನ್ನತ ಸ್ತರದಲ್ಲಿ ಇರುವ ಮನುಷ್ಯನೇ ತನ್ನ ಪಾಡಿಗೆ  ತಾನು ಇರೋದು ಬಹಳ ಕಮ್ಮಿ . ಇತರ ಮೇಲೆ ವಿನಾ ಕಾರಣ ದ್ವೇಷ, ಅಸೂಯೆ ,  ಕಾಲು ಕೆರೆದು ಜಗಳ ಮಾಡುವಾಗ ಪ್ರಾಣಿಗಳು ಹೀಗೆ ಮಾಡಿ ಕೊಳ್ಳೋದು  ವಿಶೇಷ  ಏನೂ ಇಲ್ಲ .  ಆದರೆ ನಮ್ಮ ನಂದಿನಿ ಸುಪರ್ದಿ ಯಲ್ಲಿ ಇರುವ ಹಸುಗಳ ಪೈಕಿ ಯಾರ ಜೊತೆಗಾದರೂ ಬೇರೆ ಹಸು ಕರುಗಳು ಜಗಳಕ್ಕೆ ಕಾಲು ಕೆರೆದರೆ ನಂದಿನಿ ಅವರನ್ನಿ ಹಿಗ್ಗಾಮುಗ್ಗ ಥಳಿಸಿ ಇನ್ನೆಂದೂ  ಅವು ತಂಟೆಗೆ ಬರದಂತೆ ಮಾಡುತ್ತಿದ್ದಳಂತೆ.
     ಸಂಜೆ ವರೆಗೆ ಹುಲ್ಲು ಮೇಯ್ದು ಮನೆ ಗೆ ಹಿಂತಿರುವಾಗ ಸಮಯದಲ್ಲಿ ಎಲ್ಲರನ್ನು ಒಟ್ಟು ಹಾಕಿ ಕೊನೆಯಲ್ಲಿ ಬರುವ ನಂದಿನಿ ಅರ್ಧ ದಾರಿ ಆದ ಮೇಲೆ ಎಲ್ಲರನ್ನು ಬದಿಗೆ ಸರಿಸಿ ಸರತಿ ಸಾಲಿನಲ್ಲಿ ತಾನೇ ಮೊದಲಿಗಳಾಗಿ ಬರೋದು. ಅಂತು ಹಟ್ಟಿಗೆ ನುಗ್ಗೋದು ಅವಳೇ ಮೊದಲು !  ಇಲ್ಲಿಗೆ ಮುಗಿಯಲಿಲ್ಲ ಸಂಜೆ ಪಾಲಿನ ನೀರು , ಅಕ್ಕಚ್ಚು  ಕುಡಿದ ಮೇಲೆ ಮತ್ತೆ ಯಾರದ್ರು ದನಕ್ಕೆ ಬೈಹುಲ್ಲು ಹಾಕಿ ಅಂದರೆ ಸಾಕು ಅಂತೆ, ಹೂ೦ ... ಮತ್ತೆ 'ಹೂ೦'  ಕಾರ ಶುರು. ನಾಲಿಗೆ  ಚಪ್ಪರಿಸೋದು ಏನು ?  ಕತ್ತು ಉದ್ದ ಮಾಡಿ ನೋಡೋದು ಏನು, ಕಿವಿ ಅರಳಿಸಿ ನೋಡೋದು ಏನು ? ಇದೆನ್ನೆಲ್ಲಾ  ಅಮ್ಮ ಹೇಳಬೇಕು ,ನನ್ನ  ಬಿಟ್ಟ ಕಣ್ಣು ಬಾಯಿ  ಹಾಗೆ ಇರುತ್ತೆ !  ಎಲ್ಲರೂ  ಊಟ ಮಾಡಿ ಮಲಗುವವರೆಗೆ ಬೇರೆ ಯಾವ ಹಸುಗಳು  ಮಲಗಿದರೂ  ನಂದಿನಿ ಮಲಗ್ತಾ ಇರಲಿಲ್ಲ ಅಂತೆ. ಮನೆಯ ಸದಸ್ಯರು ಮಲಗಿದ ಮೇಲೆಯೇ  ಅವಳು ಮಲಗೋದು.
      ನಮ್ ನಂದಿನಿ  ಸಿಕ್ಕಾಪಟ್ಟೆ ಮೈ ದೇಹ ಎಲ್ಲ ಶುಚಿಯಾಗಿ ಇಟ್ಟು ಕೊಳ್ತಾ  ಇದ್ಲಂತೆ. ಹಟ್ಟಿಗೆ ಬಂದ ಮೇಲೆ ಅವಳಿಗೆ ನೈಸರ್ಗಿಕ ಕರೆಗಳು ಬಂದ್ರೆ ತಾನು ನಿಂತ ಜಾಗದಿಂದ ಅವಳ ಕತ್ತಲ್ಲಿ ಇದ್ದ ಹಗ್ಗ ಎಷ್ಟು ಉದ್ದ ಇತ್ತೋ ಅಷ್ಟು ಹಿಂದೆ ಬಂದು ಎಲ್ಲ ಮಾಡಿ ತಾನು ಬೆಚ್ಚಗೆ ಇರುವಲ್ಲಿ ಮಲಗಿ ಕೊಳ್ತಾ ಇದ್ದಳು. ನಮ್ ಕೊಟ್ಟಿಗೆಯಲ್ಲಿ ನ೦ದಿನಿ ಮಾತ್ರ ಹೀಗೆ , ಉಳಿದೊರೆಲ್ಲ ಕಾಟುಗಳೆ ಸೈ!!  ಸಿಕ್ಕ ಸಿಕ್ಕ ಜಾಗದಲ್ಲಿ ಮಾಡಿ ಎಲ್ಲ ರಾಡಿ ಮಾಡಿ ಕೊಳ್ತಾ ಇದ್ದವು. ಕೆಲವೊಮ್ಮೆ ನಂದಿನಿ ಜಾಗದಲ್ಲಿ ಕೂಡಾ ಮಾಡಿ ಬಿಡುತ್ತ ಇದ್ದವು . ಹೀಗೆ ಎಲ್ಲಾದರು ಆಯಿತೋ .. ಅಲ್ಲಿಗೆ ಆ ದಿನ ಇಡೀ ನಿಂತೇ ಕಾಲ ಕಳೆಯೋದು.. ಎಷ್ಟೇ ಶುಚಿ ಗೊಳಿಸಿ  ಕೊಟ್ರು ಅವಳು ಮಲಗೋದೇ ಇಲ್ಲ. ಸೆಣಬಿನ ಗೋಣಿ ಹಾಸಿ ಕೊಟ್ಟರೂ ಅಷ್ಟೇ ಮಲಗೋದೇ ಇಲ್ಲ . 
      ವಿಶೇಷ ಅಂದ್ರೆ ಅವಳು ಹಾಕಿದ ೫-೬ ಕರುಗಳು ಎಲ್ಲ ಹೆಣ್ಣು ಕರುಗಳು ಪ್ರತಿ ವರ್ಷ ಒಂದೊ೦ದು  ಮುದ್ದು ಕರುವನ್ನು ಕೊಡುತ್ತ ಬಂದಳು. ವರ್ಷಗಳು ಸಾಗಿ ಅವಳಿಗೂ ವಯಸ್ಸಾಯಿತು . ಕರುಗಳನ್ನು ನೀಡುವ ಶಕ್ತಿ ಕಳೆದು ಕೊಂಡಳು . ಕರು ಗಳನ್ನು ಹಾಕದೆ ಹಾಲು ಕೊಡೋದು ಸಾಧ್ಯವಿಲ್ಲದೇ , ನನ್ನ ಅಮ್ಮನ ಹೊರತು ಎಲ್ಲರಿಗೂ ಬೇಡವಾದಳು . ಮನೆಯಲ್ಲಿ ಮಾತು ಕತೆ ಇನ್ನು ನಂದಿನಿಯನ್ನು ಮಾರಿ ಬಿಡೋಣ. ಕರುವು ಹಾಕಲೂ ಆಗದು ಅತ್ತ ಹಾಲೂ ಇಲ್ಲ . ಸುಮ್ಮನೆ ಹಿಂಡಿ, ಬೈ ಹುಲ್ಲು ದಂಡಕ್ಕೆ. ಅಮ್ಮನ ಕೂಗು ಅರಣ್ಯ ರೋಧನವಾಯಿತು. ಅಮ್ಮನ ಕೂಗು ಯಾರ ಕಿವಿಗೂ ಕೇಳಲೇ ಇಲ್ಲ. ನಮ್ಮ ನಂದಿನಿ ಇರಲಿ, ಗೊಬ್ಬರ ಮಾಡಿ ಕೊಡುವಳು ಅಲ್ವಾ ಗದ್ದೆಗೆ , ಮನೆಯ ಹಿತ್ತಲಿನಲ್ಲಿ ಬೆಳೆಯುವ ತರಕಾರಿಗೆ ಮತ್ತೆ ಏನು ಬೇಕು ? ಅವಳ ಹುಲ್ಲಿನ, ಹಿಂಡಿ ಖರ್ಚಿಗೆ ಸಾಕು ... ಅಂದೂ ಹೇಳಿ ನೋಡಿದರು ಅಂತೆ.
          ನನ್ನ  ಅಜ್ಜ ಯಾವ ಮಾತು ಕೇಳದೆ ಮಾರೋದೇ ಅಂತ ನಿರ್ಧಾರ ಮಾಡಿಯೇ ಬಿಟ್ಟರು. ಆದರೆ ಇದೆಲ್ಲ ಹೇಗೆ ನ೦ದಿನಿಗೆ ತಿಳಿಯಿತೋ  ಗೊತ್ತಿಲ್ಲ  ಅವಳು  ತಾನು ಈ ಮನೆಯ ಸದಸ್ಯೆ ಇನ್ನು ಮುಂದೆ ಅಲ್ಲ ಅಂತ .. ಎಲ್ಲ ಅವಳ ಕಾರು ಬಾರು ಕೈ ಬಿಟ್ಟಳು. ಯಾವ ಚಟುವಟಿಕೆ ಇಲ್ಲದೆ ಮಂಕಾದಳು , ಹಟ್ಟಿಗೆ ಬ೦ದ ಕೂಡಲೇ ಸಿಕ್ಕ ಪಟ್ಟೆ  ಬುಸ್ಸ್ ಬುಸ್ಸ್ ಅಂತ ನಿಟ್ಟುಸಿರು ಬಿಡೋದು , ಕಣ್ಣಲ್ಲಿ ಧಾರಾಕಾರ ನೀರು !!  ಅಕ್ಕಚ್ಚು ಕುಡಿಯೋದು ಬಿಟ್ಟು ಬಿಟ್ಟಳು. ಅಯ್ಯೋ ಇವಳಿಗೆ ಏನೋ ಹುಷಾರಿಲ್ಲ ಎಂದು ಪಶು ವೈಧ್ಯರನ್ನು ಕರೆಸಿ ಕೇಳಿದರೆ ಇಲ್ಲ ಹುಶಾರಿದ್ದಾಳೆ ಅಂದು ಹೋದರು. ನಿಜ ಅವಳ ದೈಹಿಕ ಆರೋಗ್ಯ ಸರಿಯೇ ಇತ್ತು . ಅವಳ ಮಾನಸಿಕ ಆರೋಗ್ಯ ಕುಂದಿತ್ತು.   ತಾನು ಬೆಳೆದ ಮನೆ ಬಿಟ್ಟು ಶಾಶ್ವತವಾಗಿ ದೂರ ಹೋಗ ಬೇಕು ಎಂಬ ವ್ಯಥೆ .  ಇಷ್ಟಾದರೂ ಅಜ್ಜನ ಮನ ಕರಗಲೇ ಇಲ್ಲ .
        ಅಂದು ಮುಂಜಾನೆ ನಮ್ಮ ನಂದಿನಿಯನ್ನು ಕರೆದೊಯ್ಯಲು  ಬಂದರು . ನ೦ದಿನಿಯನ್ನು  ಹಗ್ಗ ಬಿಚ್ಚಿ ಕೊಟ್ಟರೆ ನಂದಿನಿ ತಲೆ ಕಳಗೆ ಹಾಕಿ ಕೊಂಡು ಹಿಂದೆ ಹಿಂತಿರುಗಿ ನೋಡದೆ ದಾಪುಗಾಲು ಹಾಕಿ ಹೊರಟು ಹೋದಳು . ಅವಳೇನೋ ಹೊರಟು ಹೋದಳು ಆದರೆ ಅಮ್ಮನ ಮನದಲ್ಲಿ ಅವಳ ನೆನಪು ಸದಾ ಹಸಿರು. ಅವಳ ಬಣ್ಣದ ಹಸು ಕಂಡರೆ  ಅಯ್ಯೋ ನಮ್ಮ ನಂದಿನಿ ಹೀಗೆ ಇದ್ದಳು ಅಂತ ಅಮ್ಮನಿಗೆ ಅರಿವಿಲ್ಲದಂತೆ ಬಾಯಲ್ಲಿ ಬಂದು ಹೋಗುತ್ತೆ ಇಂದಿಗೂ !!!