Saturday, August 15, 2020

ಅನುಭವ !

ಜ್ಯೋತಿಷ್ಯಶಾಸ್ತ್ರ ಒಂದು ಅನುಭವ ! 

ಜ್ಯೋತಿಷಿ ಸುಳ್ಳಾಗಬಹುದು, ಆದರೆ ಜ್ಯೋತಿಷ್ಯ ಸುಳ್ಳಲ್ಲ .ಯಾಕೆ ಈ ಮಾತು ಅಂದ್ರೆ ಇದು ನನ್ನ ಅನುಭವಕ್ಕೆ ದಕ್ಕಿದ್ದು. 

2012 ರ ಈಚೆಗೆ ಏನೋ ಇಟ್ಟ ಗುರಿಗಳು,ಇಟ್ಟ ಹೆಜ್ಜೆಗಳು ಸರಿಯಾದ ದಿಕ್ಕಿನಲ್ಲಿ ಇತ್ತು ಬದುಕು ಒಂದು ಹದಕ್ಕೆ ಬರುತ್ತಾ ಇತ್ತು.

ನಾವು ಕಷ್ಟದ ದಿನಗಳಲ್ಲಿ ಇದ್ದಾಗ ಅಮ್ಮ ಯಾವತ್ತೂ ಹೇಳೋ ಮಾತು   ರಾತ್ರಿ ರಾತ್ರಿಯಾಗಿ ಉಳಿಯೊಲ್ಲ ಹಗಲು ಹಗಲಾಗಿಯೇ ಉಳಿಯುವುದಿಲ್ಲ.

ಅದು ನಿಜವೇ ಆಗಿ ನನ್ನ ಹಗಲಿನ ದಿನ ಡಿಸೆಂಬರ್ ೧೧ ,೨೦೧೮ ರಂದು ಊಹಿಸದೇ ಇರೋ ರೀತಿಯಲ್ಲಿ ಬದಲಾಯಿತು. ಆದಿನಗಳಲ್ಲಿ ದಾರಿ ದೀಪದಂತೆ ನಿಂತಿದ್ದು ನನ್ನ ಆತ್ಮೀಯ ಕಾಲೇಜು ಗೆಳತಿಯ ಕಸಿನ್ . ಅವಳು ಕೈ ನೋಡಿ ಭೂತ ಮತ್ತು ಭವಿಷ್ಯ ಹೇಳುತ್ತಿದ್ದಳು.ಅವಳ ಪರಿಚಯ ಹೇಗಾಯಿತು ಇನ್ನೊಮ್ಮೆ ಬರೆವೆ. ಆಕೆ ಹೇಳಿದ್ದು ಯಾವ ತರ ಇತ್ತುಅಂದರೆ ನನ್ನ ಪರ್ಸನಲ್ ಡೈರಿ ತೆಗೆದು ಓದಿದ ತರ ಭೂತಕಾಲದ ಘಟನೆಗಳು ಇದ್ದವು ಹೀಗಾಗಿ ನನಗೆ ಆಕೆ ನನ್ನ ಬದುಕಿನಲ್ಲಿ ನಾನು ಕಂಡ  ಅಚ್ಚರಿ. ಅವಳು ೨೦೧೮ ಅಕ್ಟೋಬರ್ ನಲ್ಲಿ ಹೇಳಿದ್ದು ಡಿಸೆಂಬರ್ ನಲ್ಲಿ ನಿಜವಾಗಿತ್ತು.😢

ಅವಳು ಅಕ್ಟೋಬರ್ ನಲ್ಲಿ ಹೇಳಿದ್ದು ಇಷ್ಟೇ ನವೆಂಬರ್ ೩೦ ರ ಒಳಗೆ ನಿಮಗೆ ಕೆಲಸ ಆಗುತ್ತೆ ಆದರೆ ನಿಮಗೆ ಈಬಾರಿ ಕೆಲಸ ಸಿಕ್ಕಿದರೂ ಮೊದಲಿನ ನೆಮ್ಮದಿ ಇಲ್ಲ. ಅವಳು ಏನಂದರೂ ನಾನು ಯಾಕೆ ಅಂತ ಕೇಳುವ ಪದ್ದತಿ ರೂಢಿಸಿಕೊಂಡಿರಲಿಲ್ಲ.

ಈ ಸಂಕಟದ ಸಮಯದಲ್ಲಿ ನನಗೆ ಆಕೆಯೇ ಆಸರೆ ಮತ್ತೆ ಆಕೆಯ ಮೊರೆ ಹೋದೆ. ಸುಮಾರೆಲ್ಲಾ ಹೇಳಿದಳು. ಕೆಲವು ಕಿವಿ ಮಾತು ಹೇಳಿದಳು.ಫೆಬ್ರವರಿ ಸಮಯದ ನಂತರ ನಿಮ್ಮ ಕೆಲಸಮಸ್ಯೆ ಸರಿ ಹೋಗುವುದು ಅಂದಳು. 

ನನ್ನ ಮನಸ್ಸು ಒಂದೊಮ್ಮೆ ಸ್ಥಿರ ಇದ್ದರೂ ಕಷ್ಟದ ಸಮಯದಲ್ಲಿ ಮರ್ಕಟ ಮನಸ್ಸೇ ! ಸಮುದ್ರದಲ್ಲಿ ಊಹಿಸಿರದ ರೀತಿಯಲ್ಲಿ ಹಡಗು  ಬಿರುಗಾಳಿಗೆ ಸಿಕ್ಕಿ ದಾರಿ ತಪ್ಪಿದಂತೆ ಆದ  ಬದುಕನ್ನು ಪಥಕ್ಕೆ ತರಲು ನಾನು ಹತ್ತು ಹಲವು ದಾರಿ ಹುಡುಕುತ್ತಿದ್ದೆ. ಆಸಮಯಕ್ಕೆ ನಾನು ಮೋರೆಹೋಗಿದ್ದು ಜ್ಯೋತಿಷ್ಯಕ್ಕೆ! 

ಅವರು ಹಿರಿಯರು ಅವರ ಕಾಲಜ್ನಾನಕ್ಕೆ ಸದಾ ಗೌರವಿಸುವೆ. ಸುಮಾರೆಲ್ಲಾ ಭೂತಕಾಲದ್ದು ಹೇಳಿದರು ವರ್ತಮಾನಕ್ಕೆ ಬರುವಾಗ 

ನನ್ನ ಪ್ರಶ್ನೆ ಎಲ್ಲಾ ಸರಿ ಇರುವಾಗ ಹೀಗೇಕಾಯಿತು? ಮೇಲಧಿಕಾರಿಗಳ ಕುತಂತ್ರದಿಂದ ನಿಮಗೆ ಹೀಗಾಯಿತು ! 

ನನ್ನೆದೆ ಧಸಕ್! 

ಮುಂದೆ ಒಂದಿಷ್ಟು ಹೇಳಿದರು ಭರವಸೆ ಸಿಕ್ಕಿತು. ಜೂನ್‌ ನಲ್ಲಿ ಸ್ಥಳ ಬದಲಾವಣೆ ಕಾಣುತ್ತಿದೆ ನನಗೆ ಅಂದರು. ಮೊದಲೆ ಬದುಕು ಅತಂತ್ರ, ನನಗೆ ತುಂಬಾ ಆತಂಕವಾಯಿತು ಅದನ್ನು ತಡೆದು ಯಾರಿಗೆ ಅಂದೆ. ಮತ್ತೆ ಒಂದಿಷ್ಟು ಲೆಕ್ಕಾಚಾರ ನಿಮಗೇ ಹೆಚ್ಛು ಕಾಣಿಸುತ್ತಿದೆ ಅಂದರು. ನನಗಾ ? ನನ್ನ ಪ್ರಶ್ನೆ, ನಿಮ್ಮ ಕೆಲಸ ಜಾಗ ಬದಲಾಗ ಬಹುದು ನಾನು ಅದು ಆ ಸಮಯದಲ್ಲಿ ಅಸಾಧ್ಯ ಅಂದೆ ಮನೆ ಬದಲಾಗಬಹುದುಎಂದರು ನಾನು ಭಾರತಕ್ಕೆ ಬಂದು ಸೇರುವೆನಾ ಎಂದು ಕೇಳಿದೆ. ಇಲ್ಲ ಎಂದು ನಿಖರವಾಗಿ ಹೇಳಿದರು. ದೂರ ಪ್ರಯಾಣ ಇದೆಯಾ ಮತ್ತೆ ನನ್ನ ಪ್ರಶ್ನೆ . ಇಲ್ಲ ಎಂದರು 

ಮತ್ತು ಲೆಕ್ಕಾಚಾರ ಮಾಡಿ ಜೂನ್ ೧೬-೧೭ ಕ್ಕೆ ನನಗೆ ಶುದ್ದವಾಗಿ ಸ್ಥಳ ಬದಲಾವಣೆ ಕಾಣುತ್ತಿದೆ ಅಂದರು. 

ಮತ್ತೆ ನನಗೂ ಏನೂ ಕೇಳೋಕೆ ಬೇಡ ಎನ್ನಿಸಿ ಮುಂದಿನ ಪ್ರಶ್ನೆ ಕೇಳಿ ಮಾರ್ಚ್ ೧೫ ರ ಬಳಿಕ ಮುಂದೆ ಬೆಳಕಿದೆ ಅಂದರು ತೃಪ್ತಿಯಿಂದ ಹೊರಗೆ ಬಂದೆ . 

ಆ ನಂತರ ನನ್ನ ಒತ್ತಡದಲ್ಲಿ ಮಾರ್ಚ್ ೧೫ ಮಾತ್ರವೇ ನೆನಪಲ್ಲಿ ಉಳಿದು ಜೂನ್ ಕತೆಮರೆತೇ ಹೋಯಿತು. 

ಅಲ್ಲಿವರೆಗೆ ಕತ್ತಲೆಯಲ್ಲಿ ಇದ್ದ ಬದುಕು ಊಹಿಸದಂತೆ ಬೆಳಕಿನೆಡೆಗೆ ದಾಪುಗಾಲು ಹಾಕಲು ಶುರು ಮಾಡಿತು.ದಾರಿ ಏನೋ ಸಿಕ್ಕಿತು ಆದರೆ ತುಂಬಾ ಕಷ್ಟದ ದಾರಿ !ಅದನ್ನು ಸವೆಸೋಕೆ ನಿಂತ ಕಥೆಯಲ್ಲಿ ನನಗೆ ಯಾವುದಕ್ಕು ಸಮಯ ಇರಲಿಲ್ಲ . ಮಾರ್ಚ್ , ಎಪ್ರಿಲ್ ಮೇ ಕಳೆದ ಮೇಲೆ ಮನೆಯ ಬಾಡಿಗೆ ನವೀಕರಣದ ನೆನಪಾಯಿತು. ಬಾಡಿಗೆ ಕೇಳಿ ತಲೆ ತಿರುಗಿತು. ಈಗ ಇರೋ ಪರಿಸ್ಥಿತಿಗೆ ಆ ಬಾಡಿಗೆ ಕೊಡೋಕೆ ಸಾಧ್ಯವಿಲ್ಲ ಅನ್ನಿಸಿ ಬೇರೆ ಮನೆ ಹುಡುಕಲು ಶುರು ಮಾಡುವ ಕಾರ್ಯ ! ರಾತ್ರಿ ಇಡಿ ಕೂತು ಮನೆ ಇದೆಯೇ ಎಂದು ಆನ್ಲೈನ್ ಹುಡುಕಾಟ . ಮನೆಗಳು ಒಂದೇ ದಿನದಲ್ಲಿ ೫೦ ನೋಡಿರ ಬಹುದು ಒಂದೂ ಕೈಗೆ ಬರುವ ಲಕ್ಷಣ  ಕಾಣಲಿಲ್ಲ . ಒಂದರ ಬಾಗಿಲ ದಿಕ್ಕು ಸರಿ ಇಲ್ಲವಾದರೆ ಇನ್ನೊಂದರಲ್ಲಿ ಅಡುಗೆ ಮನೆ ದಿಕ್ಕು ಸರಿ ಇಲ್ಲ ಎಂದು ಪತಿರಾಯನ ವರಾತ !ನನ್ನ ಮಾತಿಗೆ ಮನೆಯ ವಿಚಾರದಲ್ಲಿ ಬೆಲೆಯೇ ಇಲ್ಲ. ಹೀಗಾಗಿ ನಾನು ಇದೊಂದು ವಿಷ್ಯದಲ್ಲಿ ಮಾಗಿಯ ಕಾಲದ ಕೋಗಿಲೆಯೇ.

ಮತ್ತೆ ಒಂದು ರಾಶಿ ಮನೆಯ ಹುಡುಕಾಟ ನನ್ನ ನಿದ್ದೆ ಹಾಳು ! ಒಂದು ಮನೆ ಒಪ್ಪಿಗೆ ಆಯಿತು . ಸದ್ಯ ಬರೋ ೪-೫ ಘಂಟೆ ನಿದ್ರೆ ಆದರೂ ನೆಮ್ಮದಿಯಿಂದ ಮಾಡುವೆ ಅಂತ ನಿಟ್ಟುಸಿರು ಬಿಟ್ಟೆ . ಅದು ೧ ದಿನಕ್ಕೆ ಅಷ್ಟೇ ... 

ಹೊಸಮನೆಗೆ ಒಟ್ಟಾರೆ ನುಗ್ಗೊ ಪೈ ಕಿ ನಾನಲ್ಲ. ಜೂನ್ ೨೮ ಒಳ್ಳೆಯ ದಿನ ಅಂತ ನಿರ್ಧರಿಸಿ ತಯಾರಿ ಶುರು ಮಾಡಿದೆ . 

ಕಳೆದ ಏಳು ವರ್ಷದ ಹಿಂದೆ  ಮಾಡಿದ ಒಂದು ತಪ್ಪಿನಿಂದ ನಾನೇ ಮತ್ತೆ ಎಲ್ಲದಕ್ಕೂ ಹೋಗಬೇಕಾದ ಅನಿವಾರ್ಯತೆ . ೭ ವರ್ಷ ಜವಾಬ್ದಾರಿ  ನೋಡಿದೆ ಇನ್ನು ನೀನೇ ನೊಡಿಕೊ ಅಂದರೆ , ಅಲ್ಲಾ ನನ್ನ ಬದುಕೆ ದಿಕ್ಕೆಟ್ಟು ಹೋಗಿದೆ ಈ ಸಮಯದಲ್ಲಿ ಇದೊಂದು ಹೊಸ ಸಾಹಸ ಬೇಡ ! ಎಂದಾಗ ಮತ್ತೆ ಅದೇ ರಾಗ ಅದೇ ಹಾಡು ನನ್ನ ತಲೆ ಮೇಲೆ ಎಲ್ಲವೂ . 

ಇಲ್ಲಿ ಮನೆ ಬದಲಾವಣೆ ಅಂದರೆ ಹತ್ತು ಕಿರಿ ಕಿರಿ ಅಂತಲೇ ಅನ್ನಿಸೋದು ವಿದ್ಯುಚ್ಛಕ್ತಿಯ ಆಫೀಸ್ ಗೆ ಹೋಗು ಅಲ್ಲಿ ಡೆಪಾಸಿಟ್ 

ಗ್ಯಾಸ್ ಗೆ ಮತ್ತೆ ಡೆಪಾಸಿಟ್ ! 

ನಮಗೆ ಇದು ಮೊದಲ ಬಾರಿಗೆ ಮನೆ ಬದಲಾವಣೆ ಆಗೋಕೆ ಹೋಗಿ ಎಲ್ಲಾ ಹೊಸದು, ಆಫೀಸ್ ನಲ್ಲಿ ನಿಮಗೆ ಹೊಸ ಮನೆಗೆ ಕನೆಕ್ಶನ್ ಯಾವಾಗ ಬೇಕು ಅಂದರು ನಾನು ಯೋಚಿಸಿ ಜೂನ್ ೧೮ ಅಂದೆ. ಹಾಳೆ ಮನೆ ಹೇಗೂ ಪಕ್ಕದಲ್ಲಿ ಇದೆ ೧೮ ಜೂನ್ ನಿಂದ ಸ್ವಲ್ಪ ಸಾಮಾನು ಸಾಗಿಸಿ ಕೊನೆಗೆ ೨೮ ರಂದು ಪೂರ ಸಾಗಿಸಿ ಬಿಡೋಣ ಅಂತ ಯೋಚಿಸಿದ್ದೆ. 

ಆ ಕೌಂಟರ್ ನಲ್ಲಿದ್ದ ಮನುಷ್ಯ ಲೆಬನಾನ್ ರಾಷ್ಟ್ರೀಯತೆಯ ವ್ಯಕ್ತಿ. ನಾನು ಮೂರು ಬಾರಿ ಕೇಳಿದೆ ೧೮ ರ ಬಳಿಕ ಹಳೆ  ಮನೆಯಲ್ಲಿ ವಿದ್ಯುತ್ ಸಂಪರ್ಕವಿರುತ್ತದೆಯೇ ? ಅವ ಹೌದು ಅಂದ ಮೇಲೆ. ಅಲ್ಲಿಂದ ಹೊರಗೆ ಬಿದ್ದೆ . 

ಮತ್ತದೇ ತಲೆ ತುಂಬಾ ಯೋಚನೆ ಈ ಮನೆಗೆ ಬಂದ ಮೇಲೆ ಬದುಕು ಒಂದು ಹದಕ್ಕೆ ಬಂದಿತ್ತು ಇದೇ ಮನೆಯಲ್ಲಿ ಬದುಕು ಸರಿ ಪಡಿಸೋಕೆ ಆಗದಷ್ತು ಹದ ಕೆಟ್ಟಿತು. ಯಾಕೆ ಹೀಗಾಯ್ತು ಉತ್ತರ ಸಿಗದೆ ಉಳಿಯಿತು. 

ಜೂನ್ ೧೮ ಎಂದಿನಂತೆ ಎದ್ದು ಅಡುಗೆ ಮುಗಿಸಿ ಮಗುವನ್ನು ಶಾಲೆಗೆ ಕಳಿಸಿ ನಾನು ಶಾಲೆ ಸೇರಿದ್ದೆ ಪತಿರಾಯನೂ ಆತನ ಆಫೀಸ್ ಸೇರಿದ್ದ.

ಸಂಜೆ ಮನೆಗೆ ಬಂದಾಗ ಮನೆ ಕತ್ತಲು ಗವಿ ವಿದ್ಯುತ್ ಸಂಪರ್ಕ ಇರಲಿಲ್ಲ. ನನ್ನ ತಲೆ ನೇರ ಓಡಿತು ಇದು ಆ ಲೆಬನಿಯ ಭಾಷೆ ಬರದ ಕತೆಯ ಪರಿಣಾಮ . ಬ್ಯಾಗ್ ಬದಿಗೆ ಹಾಕಿ ಮತ್ತೆ ವಿದ್ಯುತ್ ಸಂಪರ್ಕ ಪಡೆಯಲು  ಆಫೀಸ್ ಗೆ ಪಯಣ . 

ಅಲ್ಲಿ ಅವನ ಬಳಿ ಹೇಳಿದರೆ ಕಾಲ್ ಸೆಂಟರ್ ಗೆ ಕರೆ ಮಾಡಿ ದೂರು ಕೊಡಿ ಅಂದ . ದೂರು ಏನೋ ದಾಖಲಿಸಿದೆವು ಆದರೆ ವಿದ್ಯುತ್ ಸಂಪರ್ಕ ಸಿಗುವುದು ಯಕ್ಷ ಪ್ರಶ್ನೆ ಅನಿಸಿತು. ಕೊನೆಯಲ್ಲಿ ಹಾಗೂ ಹೀಗೂ ೧ ಗಂಟೆ ಬಳಿಕ ಸಂಪರ್ಕ ಸಿಗುವುದು ಎಂದಾಯಿತು. 

೨ ಗಂಟೆ ತಡೆದು ಬಂದರೂ ಮನೆ ಕತ್ತಲ ಗವಿ ! 

ಕೊಲ್ಲಿರಾಷ್ಟ್ರದಲ್ಲಿ ವಿದ್ಯುತ್ ಸಂಪರ್ಕ ನಿರಂತರ ಇದ್ದುರೂಡಿಯಾಗಿತ್ತು ಆದರೆ  ಆದಿನ ಅನ್ಯಗ್ರಹದಲ್ಲಿ ಬಿದ್ದ ಅನುಭವ !

ಮತ್ತೆ ನೀರಿಲ್ಲ, ಗ್ಯಾಸ್  ಇಲ್ಲ ಆದರೆ ಮರನೇ ದಿನ ಕೆಲಸಮಾಡಬೇಕಲ್ಲ ಅದನ್ನು ಯೋಚಿಸಿ ಮತ್ತೆ ಕಾಲ್ ಸೆಂಟರ್ ಗೆ ಕರೆ ಮಾಡಿದಾಗ ಒಂದು ಪ್ರಶ್ನೆ ನಿಮಗೆ ಫೈನಲ್ ಬಿಲ್ ಬಂದಿದೆಯೇ 

ನಾನು ಹೌದು ಎಂದೆ. ಅಂದು ಶಾಲೆಯಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಬಿಲ್ ನೋಡಿದ್ದೆ. 

ಹಾಗಾದರೆ ಇನ್ನು ಕನೆಕ್ಷನ್ ಬೇಕಾದರೆ ಮತ್ತೆ ಡೆಪಾಸಿಟ್ ಇಡಿ ಅಂದ. ಸುಮ್ಮನೆ ಕನೆಕ್ಷನ್ ಕೊಡೋಕೆ ಆಗೊಲ್ಲ .ಬೇಸರವಾಯಿತು  ಸರಿ ಅಂತ ಕತೆಯನ್ನು ಮುಗಿಸಿದೆ. 

ನಮ್ಮ ಬಳಿ ಮತ್ತೆ ಡೆಪಾಸಿಟ್ ಇಡುವ ಶಕ್ತಿಯೇ ಉಳಿದಿರಲಿಲ್ಲ. ತಲೆ ಕೆಟ್ಟೇ ಹೋಯಿತು ಆ ಲೆಬನಿಯ ಭಾಷೆ ಬಾರದ ಸ್ಥಿತಿ ನನಗೆ ಈ ಅವಸ್ಥೆ ನೀಡಿತು . 

ಮುಂದೇನು ? 

ಗಂಡನ ಬಳಿ ಹೇಳಿದೆ ಒಮ್ಮೆ ಅಲ್ಲಿ ಹೋಗಿ ನೋಡೋಣ ಅಲ್ಲಿ ಎಲ್ಲಸರಿ ಇದ್ದರೆ ಅಲ್ಲೆ ಹೋಗಿ ಮಲಗಿ ಬಿಡೋಣ ನಾಳೆ ಬೆಳಗ್ಗೆ ನಾನು ಏನಾದ್ರೂ ಪರಿಹಾರ ಹುಡುಕುವೆ ಅಂದಾಗ ಗಂಟೆ ರಾತ್ರಿ ೧೧ . ಸರಿ ಅಂತ ನಾನು  ಒಂದು ಚಾಪೆ ೨ ದಿಂಬು , ಹೊದಿಕೆ , ನೀರಿನ ಬಾಟಲಿ , ಮಾರನೇ ದಿನಕ್ಕೆ ಬೆಳಗೆಗೆ ಇರಲಿ ಅಂತ ಒಂದು ಸ್ವಲ್ಪ ಅಕ್ಕಿ ರೈಸ್ ಕುಕ್ಕರ್ ಹಿಡಿದುಕೊಂಡು ಹೊಸ ಮನೆಗೆ ಹೊಕ್ಕಾಗ ಗಂಟೆ ೧೧:೩೦ .ದಿನಾಂಕ ಜೂನ್ ೧೮ , ೨೦೧೯

ಅಲ್ಲಿ ವಿದ್ಯುತ್ ,ನೀರು ಇತ್ತು,ನಿದ್ದೆ ಬಾರದು ಹೊಸ ಜಾಗ ಇದೇಕೆ ಹೀಗಾಯಿತು ಎಲ್ಲಾ ಸರಿಯಾಗಿ ಕೇಳಿದ್ದೆವಲ್ಲ ಅಂತ ಸುಮಾರು ಹೊತ್ತು ಯೋಚಿಸಿದ ಬಳಿಕ ಒಂದೇ ಸಲ ನಾನು ಆದಿನ ಹಿರಿಯ ಜ್ಯೋತಿಷಿ ಹೇಳಿದ್ದನ್ನು ಮೊಬೈಲ್‌ನಲ್ಲಿ  ರೆಕಾರ್ಡ್ ಮಾಡಿದ್ದೆ ಇದೆಯಾ ಅಂತ ಹುಡುಕೊಕೆ ಶುರು ಮಾಡಿದರೆ ಮೊದಲಿಗೆ ಸಿಗಲಿಲ್ಲ ಕೊನೆಗೆ ಅದು ಸಿಕ್ಕಿತು. 

ಸ್ಥಳ ಬದಲಾವಣೆ ಜೂನ್ ೧೬-೧೭ಕ್ಕೆ ನನಗೆ ಶುದ್ದವಾಗಿ ಕಾಣುತ್ತಿದೆ ಕಿವಿಯಲ್ಲಿ ಕೇಳಿದಾಗ  ಮನುಷ್ಯನದ್ದು ಏನೂ ಇಲ್ಲ ಈ ಭೂಮಿಮೇಲೆ ಮನುಷ್ಯನಿಂತ ಮೀರಿದ ಅಗೋಚರ ಶಕ್ತಿ ಇರುವುದು ನಿಜವಾಗಿಯೂ ಹೌದು, ಅಂತೆಯೇ ಜ್ಯೋತಿಷ್ಯ ಎಷ್ಟು ನಿಖರ  ಅನ್ನಿಸಿ ಭಾರತೀಯ ಶಾಸ್ತ್ರದ ಮೇಲೆ ಗೌರವ ಇಮ್ಮಡಿಯಾಯಿತು.

 

 

 

 

 

 

 

 

 


 

 

 

 

 

 

 

No comments: