Wednesday, July 31, 2013

ಮಠದಲ್ಲೊಂದು ಮಾಣಿಕ್ಯ - ಕಾಳು ಎಂಬೊಂದು ಶ್ವಾನ-- ೨

ಚಿತ್ರ ಕೃಪೆ: ಅಂತರ್ಜಾಲ
     ದಿನಗಳು ಸಾಗಿದಂತೆ ಕಾಳು ಮನೆಯ ಸದಸ್ಯ ನಾದ . ಒಂದು ದಿನ ಅವನನ್ನು ವಾಕಿಂಗ್ ಗೆ ಬಯಲಿಗೆ ಕರೆದು ಕೊಂದು ಹೋಗುವ ಬದಲು ೫  ನಿಮಿಷ ದೂರ ಇರೋ ನಮ್ಮ ಮನೆಗೆ ಕರ ಕೊಂಡು  ಬಂದೆ. ಅಮ್ಮ ಅವನಿಗೆ ಅವನ ಇಷ್ಟದ ಇಡ್ಲಿ ಕೊಟ್ರು. ೪- ೫ ಇಡ್ಲಿ ತಿಂದ. ಸುತ್ತ ಮುತ್ತ ಓಡಾಡಿದ .ಅಲ್ಲಿಂದ ಮೇಲೆ ದಿನ ನಮ್ಮ ಮನೆಗೆ ಒಂದು ಭೇಟಿ  ಅದು ಅವನನ್ನು ಸುತ್ತೋದಕ್ಕೆ  ಬಿಟ್ಟ ಕೂಡ್ಲೇ! ಏನಾದ್ರು ತಿಂಡಿ ಕೊಡಲೇ ಬೇಕು ಇಲ್ಲಾ೦ದ್ರೆ ಅವ ಕದಲೋ ಗಿರಾಕಿ ಅಲ್ಲ . ಮಳೆಗಾಲ ... ಅದೊಂದು ದಿನ ಭಾನುವಾರ! ಮುಂಜಾನೆಯಿಂದಾನೇ ಸೋನೆ ಮಳೆ ಸುರೀತ ಇತ್ತು. ಬೆಳಗ್ಗೆ ತಿಂಡಿ ತಿಂದು ನಾನು ತರಂಗ ಓದೋದರಲ್ಲಿ ನಿರತಳಾಗಿದ್ದೆ . ಬೆಳಗ್ಗೆ ೩ ದೋಸೆ ತಿಂದುಕೊಂಡು  ಹೋಗಿದ್ದ ಕಾಳು ಸುಮಾರು ೧೨ ಘಂಟೆಗೆ ಮತ್ತೆ ಪ್ರತ್ಯಕ್ಷ ! ' ''ಎಲ ಇವನೇ ಮತ್ತೆಯಾಕೆ ಬಂದ? ಅದೂ ಈ ಮಳೆಯಲ್ಲಿ ನೆನೆದು ಕೊಂಡು?'' ಕಾರಣ ತಿಳಿಯದು.. ನಾನು, ಅಮ್ಮ ಅವನಿಗೆ ಕೇಳಿಸುವಂತೆ ಸ್ವಲ್ಪ ಘಟ್ಟಿ ಯಾಗಿಯೇ ಬೈದೆವು. 'ಅಲ್ಲಿ ಮನೆಯಲ್ಲಿ ಅಮ್ಮಮ್ಮ ಒಬ್ಬರೇ ಇದ್ದಾರೆ . ಅಜ್ಜ, ಮಾವ ಹೊರಗೆ ಹೋಗಿದ್ದಾರೆ ಇದೊ೦ದು ನಾಯಿ ಇರೋದು ದಂಡಕ್ಕೆ ! ಇದು ಊರು ಸುತ್ತುತ್ತ ಇದೆ . ಅಲ್ಲಿ ಅಮ್ಮಮ್ಮನಿಗೆ ಯಾರಾದ್ರು  ಈಚೆ ಬಾಗಿಲಿಂದ ಒಳಹೊಕ್ಕರೂ ಗೊತ್ತಾಗಲ್ಲ ಸಾಲದಕ್ಕೆ ಅಮ್ಮಮ್ಮನಿಗೆ ಕಿವಿಕೂಡ  ಸರಿ ಕೇಳೋದಿಲ್ಲ. " ಇಷ್ಟು ನಾವು ನಾವೇ ಮಾತನಾಡಿ ಸುಮ್ಮನಾದೆವು . ಎರಡು ನಿಮಿಷ ಬಿಟ್ಟು ಕಿಟಕಿ ಯಲ್ಲಿ ನೋಡುತ್ತೇನೆ ... ಸುಮ್ನೆ ತಲೆ ಅಡಿಗೆ ಹಾಕಿಕೊಂಡು  ಒಂದೇ ಉಸಿರಲ್ಲಿ ಮನೆ ಕಡೆ ಓಟ ಕಿತ್ತಾಗಿದೆ. ಅವನ ಹಿಂದೆ ನಾನು ಹೊರಟೆ ಇನ್ನು ಎಲ್ಲಾದರೂ  ಸಂದೇಶ ಮುಟ್ಟಿಸೋಕೆ ಬಂದನೋ ಏನೋ ಅಂತ ಹೋಗಿ ಅಮ್ಮಮ್ಮನ ಕೇಳಿದ್ರೆ ಏನು ಇಲ್ಲ ಅಂದಾಗ ನೆಮ್ಮದಿ.
      ಅವನನ್ನು ಅಮ್ಮ ತುಂಬ ಮುದ್ದು  ಮಾಡ್ತಿದ್ರು ಹೀಗಾಗಿ ಸಮಯ ಸಿಕ್ಕಾಗೆಲ್ಲ ಓಡಿ  ಬಂದು ಅಮ್ಮನ ಜೊತೆ ಮುದ್ದು ಮಾಡಿಸಿ ಕೊಂಡು, ಬೇಕಿದ್ದು ಮೆದ್ದು ಹೋಗ್ತಾ ಇದ್ದ. ಮತ್ತೊಂದು ದಿನ ಮಧ್ಯಾನ್ನದ ಹೊತ್ತು  ಮತ್ತೆ ಪ್ರತ್ಯಕ್ಷನಾದ.  ಅದು ಬಂದು ಸುಮ್ಮನೆ ಇದ್ನಾ ಅದು  ಇಲ್ಲ ,ಕುಂಯಿ ಕುಂಯಿ ... ಕುಂಯಿ  ಇಷ್ಟೇ ರಾಗ ಏನು ಹೇಳ್ತಾನೋ ಏನೋ ಅರ್ಥ ಆಗ್ತಾ ಇಲ್ಲ . "ಏನೋ ಕಾಳು  ಏನು ಬೇಕು ನಿಂಗೆ" ಅಂದ್ರೆ ಬಾಲ ಆಡಿಸ್ತಾ  ನಿಂತ. ಸರಿ ಇವನಿಗೆ ತಿಂಡಿ ಹುಚ್ಚು ಅಂತ ಒಳಗಿಂದ ಚಕ್ಕುಲಿ ತಂದು ಹಾಕಿದ್ದೂ ಆಯಿತು . ಮುಟ್ಟಿ ನೋಡಲಿಲ್ಲ ಬರಿ ಹಿಂದೆ ಮುಂದೆ ಹೋಗೋದು ಕುಂಯಿ ಕುಂಯಿ ರಾಗ ಬೇರೆ... ಇದೊಳ್ಳೆ ಅವಸ್ಥೆ  ಆಯಿತಲ್ಲಾ ಅಂತ ಚಪ್ಪಲಿ ಮೆಟ್ಟಿ   ಹೊರಟೆ . 'ಬಾ ...  ಕಾಳು ಹೋಗೋಣ ಮನೆಗೆ !! "ಹೋಗಿ ನೋಡಿದ್ರೆ  ಅಮ್ಮಮ್ಮ  ನ ಮನೆಯ  ಅಂಗಳದಲ್ಲಿ ಒಂದು ನಾಗರ ಹಾವು ಬಂದಿತ್ತು. ಅದನ್ನು ಹೇಳೋಕೆ ಓಡಿ  ಬಂದಿದ್ದು ಅವನು. ಅವನ ಕುಶಾಗ್ರಮತಿಗೆ ಏನು ಹೇಳುವುದೋ ನಾನು ಕಾಣೆ . ಮನೆಯಲ್ಲಿ ಮಾವ, ಅಜ್ಜ  ಇರಲಿಲ್ಲ. ಆ ಹಾವಿಗೆ  ಸ್ವಲ್ಪ ಪೆಟ್ಟಾಗಿತ್ತು. ಅದು ತೆವಳುವ ಸ್ಥಿತಿಯಲ್ಲಿ ಇರಲಿಲ್ಲ. ಅಮ್ಮಮ್ಮ ನಂಗೆ ವಿಷಯ ತಿಳಿಸಿ  ಹಾವನ್ನು ಎತ್ತಿ ಹಾವಿಗೆ ಶುಶ್ರೂಷೆ ಮಾಡುವವರ ಮನೆಗೆ ಹೊತ್ತು ಕೊಂಡು ಹೋಗಲು ಮನೆಯಿಂದ ಸುಮಾರು ದೂರ ಇರುವ ಒಬ್ಬ ವ್ಯಕ್ತಿಗೆ ಹೇಳು , ಅವರು ಇದನ್ನು ಕೊಂಡು  ಹೋಗಿ ವ್ಯವಸ್ಥೆ ಮಾಡಲಿ ಅಂದು ಹೇಳಿದ ಮೇಲೆ  ಆ ವ್ಯಕ್ತಿಯನ್ನು ಕರೆಯಲು  ನಾನು ಓಡಿದೆ .ಆ ವ್ಯಕ್ತಿ   ಬಂದು ಆ ಹಾವನ್ನು ಚಿಕಿತ್ಸೆಗೆ ಒಯ್ದರು.        
       ಅದೊಂದು ದಿನ ಶನಿವಾರ , ನಾನು ಮನೆಗೆ ಬಂದು ಊಟ ಮಾಡಿ, ಹಳೆ ಸುಧಾ ಬೇಕು ಅಂತ ಅಮ್ಮಮ್ಮನ ಮನೆ ಅಟ್ಟ ಹತ್ತೋಕೆ ಹೋದೆ . ಮಧ್ಯಾಹ್ನವೇ  ಪವರ್ ಕಟ್ ಸಿಕ್ಕಾಪಟ್ಟೆ ಸೆಕೆ , ಅಮ್ಮಮ್ಮನೂ ಊಟಮಾಡಿ ಅಂಗಳಕ್ಕೆ ಬಂದು ಬಾಗಿಲ ಹತ್ರ ಬಂದು ಬಾಗಿಲು ತೆರೆದು ಮನೆ ಮುಂದೆ ದಷ್ಟ ಪುಷ್ಟ ವಾಗಿ  ಬೆಳೆದ ಅಶ್ವತ್ಥ ವೃಕ್ಷದ ಗಾಳಿಗೆ ಅಭಿ ಮುಖವಾಗಿ ಈಸಿ ಚೇರ್ ನಲ್ಲಿ ಕೂತು ಒಂದು ಕಾದಂಬರಿ ಓದೋಕೆ  ಹಿಡಿದು ಕೊಂಡರು. ನಾನು ಅಟ್ಟದ ಮೇಲೆ ಇದ್ದೆ. ಅಮ್ಮಮ್ಮ ಅಲ್ಲೇ ನಿದ್ದೆ ಹೋದರು . ಈ ಕಾಳು ಸ್ವಲ್ಪ ದೂರದಲ್ಲಿ ಸರಪಳಿಯಿಂದ  ಬಂಧಿತನಾಗಿದ್ದ. ಇವ ಬೌ ಬೌ ಅ೦ತ   ಗದ್ದಲ ಮಾಡೋಕೆ ಶುರು . ಸ್ವಲ್ಪ ಜೋರು ಜೋರಾಗಿಯೇ ಗಲಾಟೆ ಮಾಡೋಕೆ ಶುರು ಮಡಿದ ಮೇಲೆ,  ಮನೆಯಲ್ಲಿ ಬೇರೆಯಾರೂ ಇಲ್ಲದ ಕಾರಣ ನಾನು ಅಟ್ಟದ ಮೇಲಿಂದ ಇಳಿದು ಬಂದೆ.  ಕೆಳಗೆ ಬರೋವಾಗ ಯಾರೂ ಅತಿಥಿಗಳು ಬಂದಿರಲಿಲ್ಲ . ಅಮ್ಮಮ್ಮನಿಗೆ  ಇವನ ರಗಳೆ ಜೊತೆಗೆ ಮಲಗಿ ಅಭ್ಯಾಸ ಇತ್ತು . ನಾನು ಕೆಳಗೆ ಬಂದುದು ನೋಡಿದ  ನನ್ನ  ನೋಡಿಯೂ ಬಾಯಿ ಮುಚ್ಚೋ ಲಕ್ಷಣ ಕಾಣಲಿಲ್ಲ. ''ಏನೋ  ಕಾಳು..... "  ಅಂತ ಕೇಳಿದಾಗ ಮತ್ತದೇ ಕುಂಯಿ ಕುಂಯಿ .... ಕುಂಯಿ ರಾಗ ! ಹತ್ತಿರ ಹೋದ್ರೆ ಅಮ್ಮನ ಕಾಲ ಬುಡದಲಿ ಒಂದೇ ಅಡಿ ಅಂತರದಲ್ಲಿ ಹಾವು !!!  ಆವಾ ಬೊಗಳೋದಿಲ್ಲ ಆದಿನ ಏನಾದ್ರು ಒಂದು ಆವಾಂತರ ಆಗೇ ಬಿಡುತ್ತೆ . ಈ ಘಟನೆ  ಬಳಿಕ ಅಮ್ಮಮ್ಮನ ಮನ ಗೆದ್ದು ಅಲ್ಲೂ ಜಾಗ ಭದ್ರ ಮಾಡಿ ಕೊಂಡ .
 ಇನ್ನೊಮ್ಮೆ ಕಾಳು ಹೆಗ್ಗಣಗಳಿಗೆ ದುಃಸ್ವಪ್ನವಾದ ಬಗೆ!!

No comments: