Tuesday, February 26, 2013

ಮಂಜೂ- ಮಹಾಮಂಜರಿ -೨

              ಮಂಜು ಏನೋ ಅಲ್ಲಿಂದ ಪರಾರಿ ಆದ, ನಾನು ನನ್ನ ದುಃಖದಿಂದ ಹೇಗೆ ಪಲಾಯನ ಮಾಡಲಿ? ನನ್ನ ದುಃಖ ಪಲಾಯನಕ್ಕೆ ಒಂದೇ ಮಾರ್ಗ ಮಂಜು ನಂಗೆ ಮರಳಿ ಸಿಗಬೇಕಿತ್ತು. ದಿನಾ ಶಾಲೆಯಿಂದ ಮನೆಗೆ ಬಂದ ಮೇಲೆ ಆ ಗುಲಾಬಿ ಅಮ್ಮನ ಅಕ್ಕ -ಪಕ್ಕದ ಮನೆಯಲ್ಲಿ ಎಲ್ಲಾ ಅವನ ಪರಿಚಯ ಹೇಳಿ ಅವನನ್ನು ನೋಡಿದ್ದೀರಾ ? ಅವನು ನಿಮ್ಮ ಮನೆಗೆ ಬಂದಿದ್ದಾನಾ ಅಂತ ವಿಚಾರಿಸುತ್ತಿದ್ದೆ. ೩ ದಿನ ಕಳೆಯಿತು ಮಂಜುನ ಪತ್ತೆ ಇಲ್ಲ. ನನ್ನ ಅಮ್ಮಮ್ಮನ ಮೇಲೆ ಸಿಕ್ಕಾ ಪಟ್ಟೆ ಸಿಟ್ಟು ಬಂದು ಸರಿಯಾಗಿ ತರಾಟೆಗೆ ತೆಗೆದು ಕೊಂಡೆ. "ದೇವಾ ! ನೀನೋ..  ನಿನ್ನ ಬೆಕ್ಕೋ ನ೦ಗೆ ಬೇಡ ಇತ್ತು ನಿನ್ನ ಬೆಕ್ಕಿನ ಸಹವಾಸ,  ಇದೊಳ್ಳೆ "ಅಜ್ಜಿ ದನದ ಕತೆ" ಆಯಿತು. ಅಂತ ಹೇಳಿದರು.  ಪಾಪ ಕೊನೆಗೆ ಅವರಿಗೂ ಯಾಕಾದ್ರೂ ಆ ಮಂಜುನ ಎತ್ತಿ ಕೊಟ್ಟೆ ಅಂತ ಅನ್ನಿಸಿತು.
          ಅದೇ ದಿನ ರಾತ್ರಿ ಮಾವ ಸುಮಾರು ೯ ಘಂಟೆ ರಾತ್ರಿಗೆ ಮನೆಗೆ ಬಂದು ನಿನ್ನ ಮಂಜು ಸಿಕ್ಕಿದ! ಅಂತ ಹೇಳಿದಾಗ ಮೊದಲು ನಂಬಲಿಲ್ಲ. ಯಾಕಂದ್ರೆ ಯಾವಾಗಲೂ ನನ್ನ ಗೋಳು ಹೊಯಿಕೊಳ್ಳುವುದು ಅವರ ನೆಚ್ಚಿನ ಹವ್ಯಾಸ.. ಆದರೆ ಅವರು ಆ ದಿನ ನಿಜವೇ ಹೇಳಿದ್ರು . ಅಲ್ಲಿಗೆ ಶುರು ನನ್ನ ಪ್ರಶ್ನೆಗಳ ಸುರಿಮಳೆ ಎಲ್ಲಿ ಇದ್ದಾನೆ? ಮನೆಗೆ ಕರ್ಕೊಂಡು ಬಂದ್ರಾ ? ಹೇಗಿದ್ದಾನೆ ? ಹುಶಾರಿದ್ದಾನಾ ? ಬೇಗ ಹೋಗೋಣ ನನ್ನ ಮಂಜು ನಂಗೆ ಬೇಕು ಅಂತ ಹೇಳಿದಾಗ , ನಿನ್ನ ಮಂಜು ಕ್ಷೇಮವಾಗಿ ಇದ್ದಾನೆ  ಆದರೆ  ಅವನು ನಿಂಗೆ ಹಿಂದೆ ಸಿಗೋದು ಕಷ್ಟ ಅಂದರು. ಅಯ್ಯಾ ಏನು ಹೇಳ್ತಾ ಇದೀರಿ ನೀವು ಹೀಗೆಲ್ಲ ಒಗಟು ಹೇಳ್ಬೇಡಿ ಸರಿಯಾಗಿ ಹೇಳಿ...  ನೀವು ಅವನನ್ನು ಎಲ್ಲಿ ನೋಡಿದ್ದೀರಿ ? ಅಲ್ಲಿಂದ ಕರ್ಕೊಂಡು ಬರೋಣ ಅಂತ ನಾನು ಹೇಳಿದಾಗ ಮಾವ ಮಂಜುನ ವಿಷಯ ಸವಿಸ್ತಾರವಾಗಿ ಹೇಳಿದರು. ಗುಲಾಬಿ ಅಮ್ಮನ ಮನೆಯಿಂದ ಪರಾರಿ ಆದ ಮಂಜು ಗುಡ್ಡೆಯಲ್ಲಿ ಅಲೆದಾಡುತ್ತಿದ್ದನಂತೆ , ಹೀಗೆ ಅಲೆದಾಡುತ್ತಿದ್ದಾಗ ಅವನ ಸೌಂದರ್ಯಕ್ಕೆ ಮರುಳಾಗಿ ನಮ್ಮ ಊರಿನ ಮುಖಂಡರ ಮಗ ಅವನನ್ನು ಅಟ್ಟಿಸಿಕೊಂಡು , ಕೊನೆಯಲ್ಲಿ ಎತ್ತಿಕೊಂಡು ಅವರ ಮನೆಗೆ ಸೇರಿಸಿದರು ಅಂತೆ. ಈಗ ನಿನ್ನ ಮಂಜು "ನಡಿಮನೆ" ಯಲ್ಲಿ  ವಿರಾಜಮಾನನಾಗಿ ಇದ್ದಾನೆ. ಇವತ್ತು ಹೋದಾಗ ಅವನನ್ನು ನೋಡಿದೆ. " ಅಯ್ಯೋ ನನ್ನ ಮಂಜುನ ಯಾಕೆ ಅಲ್ಲೇ ಬಿಟ್ಟು ಬಂದಿದ್ದು ಹಿಡ್ಕೊಂಡು ಬಂದು ನನ್ನ  ಕೈಗೆ ಕೊಡೋದು ಬಿಟ್ಟು ಬರೀ ಕೈಯಲ್ಲಿ ಬಂದ್ರಲ್ಲ ನೀವು ಥೂ ...  ಸರಿ ಹೋಗೋಣ ನಡೀರಿ ಈಗ್ಲೇ  ..." ಇಷ್ಟು ಹೊತ್ತಿಗೆ ಎಲ್ಲಿಗೆ? ನಾಳೆ ಕರ್ಕೊಂಡು ಹೋಗ್ತೀನಿ ಈಗ ಮಲಗು ಅಂದು ಹೋದರು.
             ಅಯ್ಯಬ್ಬಾ  ಅಂತೂ ಮಂಜು  ಬದುಕುಳಿದ ಕ್ಷೇಮವಾಗಿದ್ದಾನೆ ಅಂತ  ತಿಳಿದು ನೆಮ್ಮದಿಯಲ್ಲಿ ಮಲಗಿ ಬಿಟ್ಟೆ. ಬೆಳಗಾದೊಡನೆ ಮತ್ತೆ ಎಂದೂ ೮ ಘಂಟೆ ಮೊದಲು ಏಳದ ನಾನು ೬ ಘಂಟೆಗೆ ಅಮ್ಮನೊಡನೆ ಎದ್ದು ಬೇಗ ಬೇಗ ಮುಖ ತೊಳೆದು ಸ್ನಾನ ಮಾಡಿ ರೆಡಿ ಆಗಿ ಬೆಕ್ಕು ತರೋಕೆ ಸಿದ್ಧಳಾಗಿ ಮಾವನ ಮನೆಗೆ ಓಡಿದೆ. ಅಲ್ಲಿ ಹೋಗಿ ನೋಡಿದ್ರೆ ಮಾಮ ಇನ್ನು ಎದ್ದಿರಲಿಲ್ಲ. ಹೋಗಿ ಎಬ್ಬಿಸಿದೆ , ಮಾಮ  ಮಾಮ ನಮ್ಮ ಮಂಜುನ ಕರ್ಕೊಂಡು ಬರೋಣ ಏಳಿ  ಎದ್ದೇಳಿ ಅಂತ ಎಬ್ಬಿಸಿದರೆ ಅವರು ಏಳೋದಕ್ಕೆ ತಯಾರಿಲ್ಲ. "ಮಾಮ ಬೇಗ ಏಳಿ ಮಂಜುನ ಕರ್ಕೊಂಡು ಬರ್ಬೇಕು , ಆಮೇಲೆ ನೀವು ಆಫೀಸ್ ಗೆ ನಾನು ಶಾಲೆಗೆ  ಹೋಗಬೇಕಲ್ವಾ ?" ಅಂದೆ. ಮಾಮ ಕಣ್ಣು ಏನೋ  ಬಿಟ್ರು,  ಹಾಸಿಗೆ ಬಿಟ್ಟು ಮೇಲೆ ಏಳಲಿಲ್ಲ ಬದಲಿಗೆ ಬೆಳ್ಳ೦  ಬೆಳಗ್ಗೆ  ನನ್ನ ಗೋಳು ಹೊಯಿಕೊಂಡರು.
        ನಂಗೆ ತಲೆ ನೋವು ನನ್ನ  ಕೂದಲಲ್ಲಿ ಬೆರಳಾಡಿಸು, ಒಂದು ಕತೆ ಹೇಳು ತಲೆ ನೋವು ಕಮ್ಮಿ ಆದ ಕೂಡಲೇ  ಬೇಗ ಹೋಗಿ ಕರ್ಕೊಂಡು ಬರೋಣ ಅಂತ ಹೇಳಿ ನನ್ನ ಕತೆ ಹೇಳುವಂತೆ ಮಾಡಿದ್ರು.ಇದು ನಾಟಕ ಎಂದು ನಂಗೆ ಗೊತ್ತಿದ್ರೂ ನಂಗೆ ಏನೂ ಮಾಡೋಕೆ ಸಾಧ್ಯ ಇರ್ಲಿಲ್ಲ. ಮಂಜು ಹೋಗಿ  ಸೇರಿಕೊಂಡ  ಮನೆ ನನ್ನ ಮನೆಗಿಂತ  ಸುಮಾರು ದೂರಾ ಇತ್ತು .  ನಡೆದು ಕೊಂಡು  ಹೋಗೋಕೆ  ದಾರಿ  ಗೊತ್ತು ಆದರೆ ದಾರಿ ನಡುವೆ ಸುಮಾರು ನಾಯಿಗಳು ಸಿಗುತ್ತವೆ.  ಆಗ ನಾಯಿ ಕಂಡರೆ ನಂಗೆ ತುಂಬಾ ಭಯ ! ಹೀಗಾಗಿ ಬೇರೆ ದಾರಿ ಕಾಣದೆ  ನಂಗೆ ನೆನಪಿದ್ದ  ಪುಟ್ಟ ಪುಟ್ಟ ಕತೆ ಒಂದೊಂದೇ ಹೇಳಿ ತಲೆ ನೋವು  ಕಮ್ಮಿ  ಆಯ್ತಾ ?  ಅಂತ ಕೇಳ್ತಾ ಬಂದೆ. ಘಂಟೆ ೮ ಆಗೋವರೆಗೂ ನನ್ನ ಮಾವನ ತಲೆ ನೋವು ಕಮ್ಮಿ ಆಗ್ಲೇ ಇಲ್ಲ ! ೮ ಘಂಟೆ ಆಗ್ತಿದ್ದ ಹಾಗೆ ದಿಗ್ಗನೆ ಎದ್ದು  ಕುಳಿತು  "ತಲೆ ನೋವು ಕಮ್ಮಿ ಆಯಿತು. ಆದರೆ ಈಗ ಟೈಮ್  ಆಯಿತು , ಇನ್ನು ಈಗ ಹೋಗೋಕೆ ಆಗಲ್ಲ ನಾನು ಆಫೀಸ್ ಗೆ ಹೋಗಬೇಕು, ನೀನು ಶಾಲೆಗೆ ಹೋಗು ಸಂಜೆ ಖಂಡಿತ  ಕರ್ಕೊಂಡು ಬರೋಣ ನಮ್ಮ ಮಂಜುನ" ಅಂತ ನನ್ನ ಸಾಗ ಹಾಕಿದರು.  ನೀವು ಮೋಸ ಮಾಡಿದ್ರಿ ನೀವು ತುಂಬಾ ಕೆಟ್ಟೋರು ಅಂತ ಅತ್ತು ಕೊಂಡು ಮನೆಗೆ ಬಂದು ಶಾಲೆಗೆ  ಹೋದೆ.
          ಸಂಜೆಯೂ ಮನೆಗೆ ತಡವಾಗಿ ಬಂದು ಏನೋ ನೆಪ ಹೇಳಿ ಕರ್ಕೊಂಡು ಹೋಗಲೇ ಇಲ್ಲ.. ಮಾರನೆ ದಿನ ನಂಗೆ ಶಾಲೆಗೆ ರಜೆ ಇತ್ತು ಹೀಗಾಗಿ ಇನ್ನು ಮಾವನನ್ನು ಕಾದರೆ ಆಗ್ಲಿಲ್ಲಾ ಅಂತ ನಾನು ಬೆಳಗ್ಗೆ ತಿಂಡಿ ತಿಂದು ರೆಡಿ ಆಗಿ ಕೈಯಲ್ಲಿ ಒಂದು ದೊಣ್ಣೆ ಹಿಡಿದು ಒಬ್ಬಳೇ ಮಂಜುನ  ಕರ್ಕೊಂಡು ಬರ್ತೀನಿ ಅಂತ ಹೊರಟೆ ! ದಾರಿಯಲ್ಲಿ ಯಾವ ನಾಯಿಗಳೂ ಅಟ್ಟಿಸಿಕೊಂಡು ಬರದೇ ಇದ್ದುದರಿಂದ ಧೈರ್ಯವಾಗಿ ಮಂಜು ಸೇರಿಕೊಂಡ "ನಡಿಮನೆ" ಮುಟ್ಟಿದೆ. ಅಂಗಳಕ್ಕೆ ಕಾಲಿಟ್ಟ ಕೂಡಲೇ  "ಮಂಜೂ.. ಮಂಜು.. "  ಎಂದು  ಕರೆದೆ ಎಲ್ಲೋ ಇದ್ದವ ಓಡಿ  ಬಂದ. ಅವನಿಗೆ ನನ್ನ ಪರಿಚಯ ಆಯಿತು , ಸದ್ಯ  ೪ ದಿನಕ್ಕೆ ನನ್ನ ಮರೆತು ಬಿಡಲಿಲ್ಲ ಅನ್ನೋ ಸಂತಸ   ಒಂದು ಕಡೆ ಆದರೆ ಮಂಜು ಪುನಃ ಸಿಕ್ಕನಲ್ಲ ಅನ್ನೋ ತೃಪ್ತಿ ಭಾವ ಇನ್ನೊಂದು ಕಡೆ!  ಇಷ್ಟಾದಾಗ ಮನೆಯವರ ಕಣ್ಣಿಗೂ ಬಿದ್ದೆ. ನಾನು ನನ್ನ ಮಂಜು  ಬೆಕ್ಕನ್ನು ಎತ್ತಿ ಕೊಂಡು ಒಳಗೆ  ಹೋದೆ. ಒಳಗೆ ಹೋಗಿ ಮನೆಯ ಹಿರಿಯ ಶಾಂತ ದೊಡ್ಡಮ್ಮ ನನ್ನು ಕೇಳಿದೆ 'ಹೇಗಿದ್ದ ನನ್ನ "ಪೋಕರಿ ಮಂಜು " ಹೇಳಿದ ಮಾತು ಕೇಳ್ತಾನ  ಊಟ ತಿಂಡಿ ಸರಿ  ತಿಂತಾನ  ರಗಳೆ ಮಾಡ್ತಾನಾ ?ಅವನ ಬುದ್ದಿ ಚೆನ್ನಾಗಿದೆಯಾ ?' ಈ ಮಂಜು ಅದಾಗಲೇ  ಆ  ಮನೆಯವರೆಲ್ಲರ  ಕಣ್ಮಣಿ ಆಗಿಹೋಗಿದ್ದ . ಇನ್ನು ಕೇಳೋ ತಯಾರಿ .....  "ನನ್ನ  ಮಂಜುನ ನನ್ನ ಜೊತೆ ಕಳಿಸಿ"   ದೊಡ್ಡಮ್ಮ ಏನು ಮಾಡಿದ್ರು ನಂಗೆ ಮಂಜು ವಾಪಸ್ ಸಿಕ್ಕಿದನೋ ಇಲ್ವೋ ನಾಳೆ ನೋಡೋಣ.

No comments: