Tuesday, February 26, 2013

ಮಂಜು ನೀನೊಂದು ತೀರಾ ... ನಾನೊಂದು ತೀರಾ ...


           ಶಾಂತ ದೊಡ್ಡಮ್ಮ ಹೇಳಿದ್ದು ಇಷ್ಟೇ ಅವನು ಮದುವೆ ಹಿಂದಿನ ದಿನ ಕತ್ತಲಾಗೋ ಸಮಯದಲ್ಲಿ ಮನೆಗೆ ಬಂದಿದ್
ದು, ಸಾಲದ್ದಕ್ಕೆ ಮಂಗಳವಾರ ಹೀಗಾಗಿ ನಾನಾಗಿ ನಿಂಗೆ ಎತ್ತಿ ಕೊಡಲ್ಲ  ಅವನನ್ನು ನಿಂಗೆ ವಾಪಸು ಕೊಡಲ್ಲ , ನೀನು ಅವನನ್ನು ಎತ್ತಿ ಕೊಂಡು  ಹೋಗುವಂತೆ ಇಲ್ಲ . ನೀನು ಕರೆ, ಅವನು ನಿನ್ನ ಹಿಂದೆ ಬಂದರೆ ಹಾಗೆ ಕರೆದು ಕೊಂಡು  ಹೋಗು. ನಂಗೆ ಏನು ಹೇಳೋಕೂ ಆಗ್ಲೇ ಇಲ್ಲ ,ಅಳು ಅಷ್ಟೇ ಬಂತು. ಕೈಯಲ್ಲಿ ಎದೆಗೆ ಅವಚಿಕೊಂಡಿದ್ದ ಮಂಜುನ ಮೈ ಎಲ್ಲ ಒದ್ದೆ ಒದ್ದೆ .. ನನ್ನ ಅವಸ್ಥೆ ಕಂಡ ದೊಡ್ಡಮ್ಮ' ನೀನು ಕರೆ ಅವನು ಬಂದರೆ ಕರ್ಕೊಂಡು ಹೋಗು' ಅಂದ್ರು.
            ಸರಿ ಇನ್ನು ಉಳಿದಿದ್ದು ಅದೇ ದಾರಿ ಅಂತ ಅವನನ್ನು ಕೆಳಗಿಳಿಸಿ , ಹೊರಗೆ ಬಂದು ಮಂಜು .. ಮಂಜೂ .. ಅಂತ ಕರೆದೆ ಒಳಗಿಂದ ಓಡಿ  ಅಂಗಳದವರೆಗೆ ಬಂದ. ಆದರೆ ಗೇಟ್ ವರೆಗೆ ಬಂದವನು ಗೇಟು ದಾಟಿ ಬರಲಿಲ್ಲ. ಗಂಟೆ ಗಂಟ್ಟಲೆ  ಪ್ರಯತ್ನ ಪಟ್ಟರೂ  ಪ್ರಯೋಜನವಾಗಲೇ ಇಲ್ಲ. ಅಂಗಳದ ಒಳಗೆಲ್ಲ ನನ್ನ ಹಿಂದೆ ಸುತ್ತಿದ ಆದರೆ ಗೇಟು ದಾಟಿ ಬರಲೇ ಇಲ್ಲ. ಯಾವ ಆಮಿಷಕ್ಕೂ ಒಳಗಲೇ ಇಲ್ಲ. ನಾನು ಮತ್ತೆ ಒಳಗೆ ಹೋಗಿ ದುಂಬಾಲು ಬಿದ್ದೆ. ಮಂಜು ನನ್ನ ಬೆಕ್ಕು ನಂಗೆ ಕೊಡಿ ಅವನನ್ನು ...  ಪ್ರಯೋಜನವಾಗಲೇ ಇಲ್ಲ . ಅವರ ಸಂಪ್ರದಾಯ ಕಟ್ಟಳೆಗೆ ನಾನು  ಬಲಿಯಾದೆ. ಆದರೂ ದೊಡ್ಡಮ್ಮ ಹೇಳಿದ್ದು ಇನ್ನು ನೆನಪಿದೆ . ನಿಂಗೆ ಮಂಜು ತಾನೇ ಬೇಕು? ನೀನು ಇಲ್ಲೇ ಮಂಜು ಜೊತೆ ಇದ್ದು ಬಿಡು! ಅಯ್ಯಬ್ಬ!! ನಾನು ಅಮ್ಮನನ್ನು ಬಿಟ್ಟು ಇರೋದು ಅದು ಸಾಧ್ಯವೇ ಇಲ್ಲ . ಕೊನೆಗೆ ಹೇಳಿದ್ರು ನಿಂಗೆ ಅವನ್ನು ನೋಡಬೇಕು ಅನ್ನಿಸಿದಾಗ ಬಂದು ನೋಡಿ ಇಷ್ಟ ಇದ್ದಷ್ಟು ಹೊತ್ತು ಅವನನ್ನು ಮುದ್ದು ಮಾಡಿ ,ಆಟ ಅಡಿ ಹೋಗು ಏನೂ ಅಡ್ಡಿ ಇಲ್ಲ . ಈಗ ನಂಗೆ ಮಾವ ಹೇಳಿದ ಮಾತು ಸರೀ ಅರ್ಥ ಆಗಿತ್ತು . ನಿನ್ನ ಮಂಜು ಕ್ಷೇಮವಾಗಿ ಇದ್ದಾನೆ ಆದರೆ..... ನಿಂಗೆ ಅವನು ವಾಪಸು ಸಿಗೋದು ಕಷ್ಟ !
          ಏನೊಂದು ಹೇಳದೇ ಅಳು ಮೋರೆ  ಹೊತ್ತು ಮನೆಗೆ ಬಂದು ಬಿಕ್ಕಿ ಬಿಕ್ಕಿ ಅತ್ತೆ. ನನ್ನ ಸಂಕಟ ನೋಡಿ ಅಮ್ಮ "ನಿಂಗೆ ಮಂಜು ತರದ್ದೇ ಇನ್ನೊ೦ದು ಬೆಕ್ಕು ತಂದು ಕೊಡುವೆ ಅಳಬೇಡ" ಎಂದು ಸಮಾಧಾನ ಮಾಡಿದರು . ನಾನು ಆಗಲೇ ಪಿರಿ ಪಿರಿ ಶುರು ಮಾಡಿದ್ದೆ . 'ನೀನು ಮಂಜು ತರದ್ದೇ ಬೆಕ್ಕು ತಂದು ಕೊಟ್ಟರೂ ಅದು ಮಂಜು ಆಗಲ್ಲ ಅಮ್ಮಾ ..  ಅದು ಮಂಜು ತರ ಮಾಡಲ್ಲ ಅಮ್ಮ , ಮಂಜು ಬೆಕ್ಕಿನಂತೆ ಅದು ನನ್ನ ಜೊತೆ ಇರಲ್ಲ , ಅದು ಪಮ್ಮಿ ಬೆಕ್ಕಿನ ಮರಿ ಆಗಲ್ಲ ಅಮ್ಮಾ ...  , ಹೀಗೆ ನನ್ನ ವಾದ ಮುಂದುವರೆದಿತ್ತು. ಕೊನೆಗೆ ನನ್ನನ್ನು ಸಮಾಧಾನ ಮಾಡೋಕೆ ಸರಿ ನಿಂಗೆ ಹೋಗಬೇಕು  ಬೇಕು ಅನ್ನಿಸಿದಾಗ ಹೋಗಿ ಮಂಜು ನ ನೋಡಿ ಕೊಂದು ಬಾ ಅಂದರು . ನಂಗೆ ದಿನಾ ಶಾಲೆಯಿಂದ ಬಂದಮೇಲೆ ಮುದ್ದು ಮಾಡಿ ಆಡೋಕೆ ಮಂಜು ಬೇಕು , ರಾತ್ರಿ ಜೊತೆಗೆ ಮಲಗೋಕೆ ಮಂಜು ಬೇಕು , ಬೆಳಗ್ಗೆ ನಾನೇ ಅವನಿಗೆ ಕುಡಿಯೋಕೆ ಹಾಲು ಹಾಕಬೇಕು . ದಿನ ನಂಗೆ ಅಷ್ಟು ದೂರ ಹೋಗೋದು ಕಷ್ಟದ ಮಾತು . ಹೀಗಾಗಿ ವಾರಕ್ಕೆ ಒಮ್ಮೆ , ಅವಕಾಶ ಸಿಕ್ಕಾಗ ಎಲ್ಲ ಹೋಗುವೆ ಅಂತ ಯೋಚಿಸಿ ಕೂತು ಬಿಟ್ಟೆ. ಆಸಮಯದಲ್ಲಿ ಮೊದಲು ಸಿಕ್ಕ ಪಟ್ಟೆ  ವಾಚಾಳಿ ಆಗಿದ್ದ ನಾನು ತೀರಾ ಮೌನಿ ಆಗಿ ಹೋದೆ.
         ನಮ್ಮ ಮನೆಯ ಅಕ್ಕ ಪಕ್ಕದ ಮನೆಯ ಎಲ್ಲ ಮಕ್ಕಳಿಗೂ ಆಡೋಕೆ ಅಕ್ಕನೋ ,ಅಣ್ಣನೋ ತಮ್ಮನೋ ,ತಂಗಿಯೋ ಇದ್ದರು. ನಂಗೆ ಮಾತ್ರ ಯಾರೂ ಇರಲಿಲ್ಲ. ಹೀಗಾಗಿ ಈ ಮಂಜು ನನ್ನ ತಮ್ಮ ತಂಗಿ ಎಲ್ಲ ಆಗಿದ್ದ. ಯಾವಾಗಲೂ ಮಂಜುವಿನ ಧ್ಯಾನದಲ್ಲೇ ಇದ್ದೆ. ಪ್ರತಿ ದಿನ ಮಂಜುವಿನ  ನೆನಪು . ಕೊನೆಗೆ ಒಂದು ದಿನ ವಾರಾಂತ್ಯ ಬಂತು, ಅಲ್ಲಿಂದ ಶುರು ನಾನು ಮಂಜು ಮೀಟ್ ಮಾಡೋದು ಪ್ರತಿ ಆದಿತ್ಯವಾರ ಬೆಳಗ್ಗೆ ! ಅವನಿಗೆ ಇಷ್ಟದ ಚಕ್ಕುಲಿ ,ಹಪ್ಪಳ ಎಲ್ಲ ಕವರಿನಲ್ಲಿ ಪಾಕ್ ಮಾಡಿ ಕೊಂಡು  ಹೋಗೋದು, ಹೋಗುವಾಗ ಒಂದು ಕೈಯಲ್ಲಿ ದೊಣ್ಣೆ! ಇನ್ನೊ೦ದು ಕೈಯಲ್ಲಿ  ಮಂಜುನ ತಿಂಡಿಗಳು ...
        ನಾನು ಹೋಗಿ ಕರೆದ ಕೂಡಲೇ ಓಡಿ  ಬರ್ತಾ ಇದ್ದ ,  ಕಾಲಿಗೆ ಸುತ್ತುತ್ತ ಇದ್ದ , ಮೀಯಾವ್..  ಮೀಯಾವ್,.. ಹೇಳ್ತಾ ಇದ್ದ . ಸ್ವಲ್ಪ ತಿಂಡಿ ತಿಂದು ಆದ ಮೇಲೆ  ಅವನನ್ನು ಎತ್ತಿ ಕೊಂಡು ಅಂಗಳದ ಒಂದು ಮೂಲೆ ಅಲ್ಲಿ ಕೂರು ತಲೆ ನೇವರಿಸಿ ಮುದ್ದು ಮಾಡ್ತಾ ಇದ್ದೆ. ಶಾಂತ ದೊಡ್ಡಮ್ಮ ಹಾ...  ಮಂಜು ನ ನೋಡೋಕೆ ಬಂದೆಯಾ ? ಅಂತ ಹೇಳಿ ನಂಗೆ ಏನಾದ್ರು ತಿನ್ನೋಕೆ ಕೊಟ್ಟು ,ಅವರ ಕೆಲಸ  ಮಾಡಿ ಕೊಳ್ತ ಇದ್ರು ಕೆಲಸ ಮುಗಿದ ಬಳಿಕ ಬಂದು ನನ್ನ ಮಾತನಾಡಿಸುತ್ತಾ ಇದ್ದರು. ನಂದು ಬರಿ ಮಂಜುನ ಕುರಿತ ಪ್ರಶ್ನೆಗಳೇ ... ಏನು ತಂಟೆ ಮಾಡಿದ ? ಊಟ ತಿಂಡಿ ತಿಂತಾನ ಹೀಗೆ ... ಕೆಲವೊಮ್ಮೆ ಬೆಳಗ್ಗೆ ಹೋದೋಳು ಮಧ್ಯಾಹ್ನ  ಮಾಡಿಕೊಂಡು ಬರ್ತಿದ್ದೆ.  ಅಮ್ಮನ  ಹತ್ತಿರ  ಬೈಗುಳ ಕೇಳಿಸಿಕೊಂಡರೂ ಸುಧಾರಣೆ ಇರಲಿಲ್ಲ . 
        ಮಂಜು ಅವರ ಕಣ್ಮಣಿ ಕೂಡ ಆಗಿದ್ದ. ಅವನಿಗೆ ಕುರು ಕುರು ತಿಂಡಿ ಇಷ್ಟ ಅಲ್ವಾ ಅದಿಕ್ಕೆ ಅವನಿಗೆ ಚಕ್ಕುಲಿ ಕಾರಕಡ್ಡಿ ಹಾಕ್ತೀನಿ ಏನೂ ಇಲ್ಲದೆ ಇದ್ದಾಗ ಹಪ್ಪಳ ಕರಿದು ಇಡ್ತೀನಿ ಅಂತ ಹೇಳುತ್ತಾ  ಇದ್ರು . ಅವನಿಗೆ ಮಲಗೋಕೆ ನನ್ನ  ಕೋಣೆಯೇ  ಆಗಬೇಕು , ನನ್ನ ಸೀರೆಯೇ ಆಗಬೇಕು ಅದೂ  ಒಗೆದು ,ಒಣಗಿಸಿ, ಮಡಿಸಿಇಟ್ಟದ್ದು ಅಥವಾ  ಹೊಸ ಸೀರೆ ! ಅಬ್ಬಾ ಅವನೊಬ್ಬ ವಿಶಿಷ್ಟ  ಬೆಕ್ಕು ... ಈ ನಮೂನೆ ಬೆಕ್ಕು ನಾನು ನೋಡಿಲ್ಲ ಅಂತ ಹಲವು ಸರಿ ಹೇಳಿದ್ದು ಇನ್ನೂ ನೆನಪಿದೆ . ಅವರ ಮನೆಯಲ್ಲಿ ಮಂಜುನ ಹೊರತು ಪಡಿಸಿ ಬೇರೆ ೨ ಬೆಕ್ಕು ಗಳು ಇದ್ದವು.  ಅವನು ಅವುಗಳಿಗೆ ಲೀಡರ್ ತರ ಇದ್ದ ಅಂತೆ.
       ನನ್ನ ಮಂಜು ಭೇಟಿ ಹೀಗೆ ವಾರಾಂತ್ಯ ದಲ್ಲಿ ನಡೀತಾ ಇತ್ತು. ದಿನ ಕಳೆದಂತೆ ಅವನು ಸರಿ ತಿಂದು ಉಂಡು ಸಿಕ್ಕ ಪಟ್ಟೆ  ದಪ್ಪ , ಭಾರ ಆಗಿಹೋಗಿದ್ದ.  ಒಂದು ದಿನ ಅವರ ಮನೆಯಲ್ಲಿ ಒಂದು ಪೂಜೆ ಸಮಾರಂಭ ಇತ್ತು. ನಮಗೆಲ್ಲಾ  ಪೂಜೆಗೆ ಆಹ್ವಾನ ಇತ್ತು.  ಹೀಗಾಗಿ  ನಾನು ಬೆಳಗ್ಗೆ ಬೇಗ ಓಡಿದ್ದೆ. ಮಂಜುನ ಎತ್ತಿಕೊಂಡು ತೋಟಕ್ಕೆ ಹೋಗಿ ಅಲ್ಲೇ ಕೂತಿದ್ದೆ. ಊಟದ ಸಮಯ ಆಗುವಾಗ ಅಮ್ಮ ನನ್ನ ಹುಡುಕಿಕೊಂಡು ಬಂದರು . ಅಮ್ಮ ನಂಗೆ "ಬೆಕ್ಕನ್ನು  ಬಿಟ್ಟು ಒಳಕ್ಕೆ ಬಾ' ಅಂದರೂ  ಅಮ್ಮನ ಮಾತು ಕೇಳದೆ ಮೆಲ್ಲನೆ  ಮಂಜುನ ಜೊತೆ ಮನೆ ಹೊಕ್ಕೆ! ಊಟದ ಸಮಯ ಎಲೆ ಹಾಕಿ ಬಡಿಸುತ್ತ ಇದ್ದರು. ನಾನು ಕೈ ತೊಳೆದು ಒಂದೇ ಕೈಯಲ್ಲಿ ಮಂಜುನ ಎತ್ತಿಕೊಂಡು ಊಟಕ್ಕೆ ಹಾಜರ್ !
       ಎಲ್ಲಾ  ನೋಡಿ ನನ್ನ ನಕ್ಕರು. ದೇವಮಾಮ( ಶಾಂತ ದೊಡ್ಡಮ್ಮನ ಮಗ ) ಅಂತೂ ನನ್ನ ಸರಿ ಗೋಳು ಹೊಯಿಕೊಂಡರು. ಎಲ್ಲಾದರೂ   ನಿನ್ನ ಮಂಜು ಪ೦ಕ್ತಿ  ನಡುವೆ  ಬಂದರೆ , ಇವತ್ತು ಮಾಡಿದ್ದು ಎಲ್ಲ ನೀನೇ ತಿಂದು ಮುಗಿಸಬೇಕು, ಹೀಗಾಗಿ ಮಂಜುನ ಕೋಣೆಯಲ್ಲಿ ಬಿಟ್ಟು ಬಾ ಅಂದರು. "ಊಹೂ ನಾನು ಮಂಜುನ ನನ್ನ ಮಡಿಲಿಂದ ಕೆಳಗೆ ಬಿಡಲ್ಲ ಅವನು ಒಳ್ಳೆ ಬೆಕ್ಕು ಹೇಳಿದ್ದು ಕೇಳ್ತಾನೆ , ನಾನು ಅವನನ್ನು ಕೆಳಗೆ ಬಿಡಲ್ಲ ಅಷ್ಟೇ " ಅಂದೆ . 'ಮಿಟ್ಟು (ನನ್ನ ವಾಚಾಳಿತನಕ್ಕೆ ಆಗ ಇದ್ದ ಹೆಸರು )ದಯಮಾಡಿ ಅವನನ್ನು ಕೋಣೆಯಲ್ಲಿ ಬಿಟ್ಟು ಬಾ... ಅವನು ಬೆಕ್ಕು, ಅವನಿಗೂ ಊಟದ ಪರಿಮಳ ಬಂದಾಗ ಹಸಿವಾಗತ್ತೆ ಅವನು ಪಂಕ್ತಿ ನಡುವೆ ಬರ್ತಾನೆ.' ನಾನು ಹೇಳಿದ್ದು ಕೇಳೋ ಜಾಯಮಾನದವಳು ಅಲ್ಲ, ಕೆಲವು ಸಲ ಹಠಮಾರಿ ,ಇನ್ನು ಕೆಲವು ಸಲ ಸೊಟ್ಟ ! "ದೇವ ಮಾಮ ಹಾಗಾದ್ರೆ  ಒಂದು ಮೂಲೆಯಲ್ಲಿ  ಮಂಜು ಗೆ ಮತ್ತೆ ನಂಗೆ   ಒಟ್ಟಿಗೆ ಊಟ ಹಾಕಿ, ಆಗ ಅವನು ಪಂಕ್ತಿ ನಡುವೆ ಬರಲ್ಲ ಊಟ ಮಾಡಿ ನನ್ನ ಮಡಿಲಲ್ಲೇ ಇರ್ತಾನೆ" ಅಂದೆ.
          ಒಟ್ಟಿನಲ್ಲಿ ನಂಗೆ ಮಂಜುನ ಬಿಡೋಕೆ ಮನಸ್ಸು ಇರ್ಲಿಲ್ಲ . ಕೊನೆಗೆ ನನ್ನ ಮಂಜುನ ಬೇರೆ ಮಾಡೋಕೆ ಮನಸ್ಸು ಇಲ್ಲದೆ ಒಂದು ಮೂಲೆಯ ಕೊನೆ ಎಲೆಯಲ್ಲಿ ಕೂರಿಸಿದರು.  ಅಂತೂ ನಾನು ಮಂಜು ಜೊತೆಗೆ ಕೂತು ಊಟ ಮಾಡಿದೆವು. ಅವನು ಅಸಾಧ್ಯ ಬುದ್ದಿವಂತ. ಊಟದ ಪರಿಮಳ ಬಂದಾಗ ನನ್ನ ಮಡಿಲಿಂದ ಎದ್ದು ಹೋಗಲಿಲ್ಲ, ೨ ಸಲ ಮೀಯಾವ್ ಅಂದ ಅದು ಹಪ್ಪಳ ದ ಸದ್ದು ಕೇಳಿದಾಗ , ಅದು ನನಗೆ ಗೊತ್ತಿತ್ತು. ಬಡಿಸುವವರ ಬಳಿ  ನನ್ನ ಮಂಜುಗೆ  ಒಂದು ಹಪ್ಪಳ  ಕೊಡ್ತೀರ ಅಂತ ಕೇಳಿ ತೊಗೊಂಡೆ . ಮಂಜು ಅದನ್ನು ತಿಂದು ಮತ್ತೆ ನನ್ನ ಮಡಿಲು ಸೇರಿ  ಬೆಕ್ಕು ಗಳು ಪ್ರೀತಿಯಿಂದ ಹೊರಡಿಸುವ "ಗುರು ಗುರು" ಸದ್ದು  ಮಾಡುತ್ತಾ ಊಟ ಮಾಡುವವರನ್ನು , ಬಡಿಸುವವರನ್ನು ನೋಡ್ತಾ ಕೂತಿದ್ದ.  ಅವನಿಗೆ ಇಷ್ಟ ತಿಂಡಿ ಬಂದಾಗ ಅದನ್ನು ಕೈಯಲ್ಲಿ ಕೇಳಿ  ಅವನಿಗೆ  ಒದಗಿಸಿದೆ ತಿಂದು ಹಾಯಾಗಿ ನನ್ನ  ಮಡಿಲಲ್ಲಿ  ಇದ್ದ . ಎಲ್ಲರ ಊಟ ಮುಗಿಯುವ ವರೆಗೂ ಯಾರಿಗೂ ತೊಂದರೆ ಕೊಡದೆ ಸುಮ್ಮನೆ ಇದ್ದ.   ಊಟದ ಬಳಿಕ ಅವನನ್ನು ಅಡುಗೆ ಮನೆಗೆ ಬಿಟ್ಟು ಕೈತೊಳೆದು ಮತ್ತೆ ಎತ್ತಿಕೊಂಡು ಬಂದು ದೇವಮಾಮನನ್ನು  ಹುಡುಕಿ ಕೊಂಡು  ಹೋಗಿ "ನನ್ನ ಮಂಜು ಪಂಕ್ತಿ ನಡುವೆ ಬರ್ಲಿಲ್ಲ, ಇನ್ನು ಉಳಿದಿದ್ದನ್ನು ನೀವೇ ತಿನ್ನಿ " ಅಂತ ತಣ್ಣಗೆ ಹೇಳಿ ಮತ್ತೂ ತುಂಬಾ ಹೊತ್ತು ಅವನ ಜೊತೆ ಕಳೆದು ಕೊನೆಗೆ 'ಮಂಜು'ನನ್ನು ಶಾಂತ ದೊಡ್ಡಮ್ಮನ ಕೋಣೆಯಲ್ಲಿ  ಬಿಟ್ಟುಮನೆಗೆ ಬಂದೆ.. ಮುಂದೆ ಮಂಜು ನನ್ನ ಸಂಬಂಧ ಹೇಗಿರುತ್ತೆ, ಏನಾಗುತ್ತೆ ನಾಳೆ ನೋಡೋಣ  

No comments: