"ನಮ್ಮ ಶಿಕ್ಷಣ ಎಷ್ಟು ಕಳಪೆ ಎಂದರೆ....!!" ಸುನಿಲ್ ರಾವ್ ಬರಹ ವಾರ್ತಾ ಭಾರತಿಯಲ್ಲಿ ಓದಿ ಸುಮ್ಮನಿರೋಕೆ ಆಗದೆ ಮನಸ್ಸು ಮಾಡಿದ ರಂಪ ...ಸಾಮಾನ್ಯವಾಗಿ ಏನಾದ್ರು ಓದಿದ ಕೂಡಲೇ ಕಾಮೆಂಟ್ ಮಾಡಕ್ಕೂ ಒದ್ದಾಡುವ ನಾನು ಈವತ್ತು ಇಷ್ಟು ಗೀಚೋ ಮನಸ್ಸು ಮಾಡಿದೆ.
ನಾನು ಓದಿದ್ದು ೯೦ ರ ದಶಕದ ಕನ್ನಡ ಮಾಧ್ಯಮದ ಖಾಸಗಿ ಶಾಲೆಯಲ್ಲಿ. ಅದೇ ಶಾಲೆಗೆ ಅಲ್ಲೇ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬರ ಮಗಳೂ ಅದೇ ಶಾಲೆಗೆ ಬರುತ್ತಿದ್ದಳು .ಒಂದನೆಯ ತರಗತಿಗೆ ದಾಖಲಾತಿ ಆಯಿತು , ನಾನು ಅವಳೂ(ವಿನು) ಒಂದೇ ತರಗತಿ ಒಂದೇ ಬೆಂಚು ಒಟ್ಟಿಗೆ ಕೂತುಕೊಳ್ತಾ ಇದ್ದೆವು. ನಾನು ಶಾಲೆಗೆ ಸೇರಿದ ಸಮಯದಲ್ಲಿ ಸ್ವಲ್ಪ ಮೌನಿಯಾಗಿದ್ದೆ. ಅವಳಿಗೆ ಶಾಲೆ ಹೊಸದು ಏನು ಅಲ್ಲ ಅದು ಎರಡನೆಯ ವರ್ಷ ಅದೇ ತರಗತಿ ಅದೇ ಸ್ಥಳ !!! ಹಿಂದಿನ ವರ್ಷ ಮಾರ್ಕ್ಸ್ ಹಾಜರಾತಿ ಇರ್ಲಿಲ್ಲ ,ಈ ವರ್ಷ ಎಲ್ಲ ಇತ್ತು ಅಷ್ಟೇ ಬದಲಾವಣೆ. ನಾನು ಒಂದನೆಯ ತರಗತಿಯ ಕನ್ನಡ ಭಾರತಿ-೧ ಇದನ್ನು ಪೂರ ಅರಗಿಸಿ ಕೊಂಡಿದ್ದೆ . ಹೀಗಾಗಿ ನಮ್ಮ ತರಗತಿ ಅಧ್ಯಾಪಕಿ ಏನೇ ಓದೋದಕ್ಕೆ ಬರ್ಯೋಕೆ ಹೇಳಿದರೂ ನಿಮಿಷದಲ್ಲಿ ಒಪ್ಪಿಸುತ್ತಿದ್ದೆವು. ಉಳಿದ ಸಮಯ ಅವಳು ಮಾತನಾಡ್ತಾ ಇದ್ಲು ನಾನು ಕೆಲಿಸಿಕೊಳ್ತಾ ಇದ್ದೆ,ನಂದು ಬರೀ ಪ್ರಶ್ನೆಗಳೇ ಅವಳಿಗೆ. ಹೀಗೆ ಸಾಗ್ತಾ ಇತ್ತು ದಿನಗಳು.
ಅದೊಂದು ದಿನ ಅಮ್ಮ ನನ್ನ ಶಾಲೆಗೆ ಬಂದು ನನ್ನ ತರಗತಿ ಅಧ್ಯಾಪಕಿಯನ್ನು ಭೇಟಿ ಮಾಡಿದ್ರು. ಆಮೇಲೆ ವಿನು ನ ಅಮ್ಮ ಕೂಡ ನನ್ನ ಅಮ್ಮನ ಬಳಿ ಏನೋ ಸುಮಾರು ಹೊತ್ತು ಮಾತ್ನಾಡಿದರಪ್ಪ!! ನಾನು ತರಗತಿಯಲ್ಲೇ ಕೂತು ನೋಡಿದ್ದೆ. ಏನೂ ಅರ್ಥ ಆಗೊ ವಯಸ್ಸು ಅಲ್ಲ ಅದು ಅದೂ ಈ ಪರಿ ರಾಜಕೀಯ!!! ಸಂಜೆ ಮನೆಗೆ ಮಾಮೂಲಿನಂತೆ ಬಂದೆ. ಅಮ್ಮ ಮೆಲ್ಲನೆ ಕೇಳಿದ್ರು "ಏನೇ ಕ್ಲಾಸ್ ನಲ್ಲಿ ತುಂಬಾ ಮಾತ್ನಾಡ್ತೀಯಂತೆ ಹೌದ ಸತ್ಯ ಹೇಳು" ಅಂದ್ರು ನಂಗೆ ಸುಳ್ಳು ಹೇಳೋಕೆ ಮೊದಲಿಂದಾನೂ ಗೊತ್ತೇ ಇಲ್ಲ. ನಾನು ಇದ್ದ ವಿಷಯವನ್ನು ಹೇಳಿದೆ ಇಲ್ಲ ಅಮ್ಮ ಟೀಚರ್ ಮಾಡೋಕೆ ಹೇಳಿದ್ದೆಲ್ಲ ಬರೆದು ಓದಿ ಆದ ಮೇಲೆ ನಾನು ವಿನು ಮೆತ್ತಗೆ ಮಾತನಾಡ್ತೀವಿ. ಅವಳು ಸುಮಾರು ಕತೆ ಎಲ್ಲ ಹೇಳ್ತಾಳೆ ನಂಗೆ ಗೊತ್ತಾಗದೆ ಇದ್ರೆ ನಾನು ಪ್ರಶ್ನೆ ಕೇಳ್ತೀನಿ ಅಂದೆ. ಅಮ್ಮ ಸ್ವಲ್ಪ ಜೋರಾಗಿಯೇ ಗದರಿ ಹೇಳಿದ್ರು, ಇಲ್ಲ ನೀನು ಕ್ಲಾಸ್ ನಲ್ಲಿ ಸಿಕ್ಕಾಪಟ್ಟೆ ಜೋರು ಅಂತೆ ತುಂಬಾ ಮಾತ್ನಾಡ್ತೀಯಂತೆ ಅಂದ್ರು . ಅಷ್ಟು ಹೊತ್ತು ಸುಮ್ಮನೆ ಇದ್ದ ನಾನು ವಾದಕ್ಕೆ ಇಳಿದೆ ಹೇಗೆ ಹೇಳ್ತೀಯ ? ನನ್ನ ಕ್ಲಾಸ್ ನಲ್ಲಿ ಗಲಾಟೆ ಮಾಡಿ ದೋರಿಗೆ,ಗಟ್ಟಿ ಮಾತನಾಡಿ ದೋರಿಗೆ ಎಲ್ಲ ನನ್ನ ಟೀಚರ್ ಹೊಡೀತಾರೆ. ನಂಗೆ ಇದು ವರೆಗೂ ಯಾವ ಟೀಚರ್ ಹೊಡೆದೇ ಇಲ್ಲ ಅಂದೆ. ಅಲ್ಲಿಗೆ ಅಮ್ಮ ಸುಮ್ಮನಾದರು.
ಆ ದಿನಕ್ಕೆ ಅಷ್ಟೇ, ಮತ್ತೆ ಇನ್ನೊ೦ದು ದಿನ ನನ್ನ ಹೆಡ್ ಮಾಸ್ಟರ್ ಅನ್ನು ಭೇಟಿ ಮಾಡಿ ವಿಷಯದ ಸತ್ಯ ಅಸತ್ಯಗಳನ್ನೂ ತಿಳಿಯೋಕೆ ಹೊರಟೇ ಬಂದರು. ಆದಿನ ನಂಗೆ ಹೆಡ್ ಮಾಸ್ಟರ್ ಇಂದ ಕರೆ ಬಂತು ನಾನು ಹೋದೆ. ಪಾಠ ಪುಸ್ತಕ ಕೊಟ್ಟು ''ಸಾಕಿದ ಕುರಿ ಮರಿ'' ಪಾಠ ಓದೋಕೆ ಕೊಟ್ರು,ದೊಡ್ಡ ಪಾಠ ಅದು ನಾನು ನಿರ್ಭಯದಿಂದ ಓದಿದೆ. ಆಮೇಲೆ ಅಮ್ಮನನ್ನು ಕೇಳಿದ್ರು ''ನಿಮಗೆ ಯಾರು ನಿಮ್ ಮಗಳಿಗೆ ಬಾಯಿ ಜಾಸ್ತಿ ಅವಳು ತುಂಬಾ ಮಾತನಾಡ್ತಾಳೆ ಅಂತ ಹೇಳಿದ್ದು ಅಂತ ?" ನನ್ನನ್ನು ನೀನು ಹೋಗು ಅಂದ್ರು ನಾನು ಸೀದಾ ಕ್ಲಾಸಿಗೆ ಬಂದೆ . ಆದರೆ ತಲೆ ತುಂಬಾ ಯೋಚನೆ ಯಾಕೆ ನಂಗೆ ಹೀಗೆ ಮಾಡಿದ್ರು , ಪಾಠ ಓದಕ್ಕೆ ಹೇಳಿದ್ರು, ಆಮೇಲೆ ಅಮ್ಮನ ಹತ್ರ ಹೀಗೆ ಹೇಳಿ ನನ್ನ ವಾಪಾಸ್ ಕಳಿಸಿದರು. ಸುಮ್ಮನೆ ಇದ್ದೆ . ಸಂಜೆ ಅಮ್ಮನ್ನು ಕೇಳೋಣ ಅಂತ ಮನೆಗೆ ಬಂದೊಳೇ ಶುರು ಮಾಡಿದೆ. ನೀನು ಮತ್ತೆ ಯಾಕೆ ಬಂದೆ ಶಾಲೆಗೇ? ಮಾಷ್ಟ್ರು ಏನು ಹೇಳಿದ್ರು ? ಯಾವ ಟೀಚರ್ ನಾನು ಗಲಾಟೆ ಮಾಡ್ತೇನೆ ಅಂತ ಹೇಳಿದ್ದು ? ಅಮ್ಮ ಒಂದೇ ಪ್ರಶ್ನೆ ಕೇಳಿದ್ರು ನಿಂಗೆ (ಕರ್ನಾಟಕದ ನದಿಯ ಹೆಸರು ) ನದಿ ಹೆಸರಿನ ಟೀಚರ್ ಗೊತ್ತಲ್ವಾ ಅವರೇ ಹೇಳಿದ್ದು .... ಅಯ್ಯೋ ಅದು ವಿನುನ ಅಮ್ಮ ಅವರು ಹೀಗೆ ಹೇಳಿದ್ರ ??? ನಂಗೆ ಅರ್ಥವೇ ಆಗಿರಲಿಲ್ಲ. ನಾನು ಬೆಪ್ಪಾಗಿ ಅಮ್ಮನ ಮುಂದೆ ಇಲ್ಲಮ್ಮಾ ಅವರು ಹಾಗೆ ಹೇಳೋದೇ ಇಲ್ಲ ಅವರು ತುಂಬ ಒಳ್ಳೆಯೋರು ಅಂದೆ. ಅದೆಲ್ಲ ನಂಗೊತ್ತಿಲ್ಲ ಅವರೇ ಹೇಳಿದ್ದು ಅಂದ್ರು . ನೀನು ಸ್ವಲ್ಪ ಗಂಭೀರವಾಗಿ ಇರು ಕ್ಲಾಸ್ ನಲ್ಲಿ ಅಂದರು.
ತಲೆ ಬುಡ ಅರ್ಥ ಆಗ್ಲಿಲ್ಲ ದಿನಗಳು ಸಾಗಿ ವರ್ಷ ಮುಗೀತು . ೨ ನೇ ತರಗತಿ( ಆಕೆ ಅಧ್ಯಾಪಕಿ) ನಂಗೆ ಬೇರೆ ಅಧ್ಯಾಪಕಿ ಇದ್ರು. ನಾನು ವಿನು ಬೇರೆ ಬೇರೆ ವಿಭಾಗಕ್ಕೆ ಹಾಕಲ್ಪಟ್ಟೆವು.ಅವಳೂ ಓದಿನಲ್ಲಿ ಜಾಣೆಯೇ ... ೩ ನೆ ತರಗತಿ ಅಲ್ಲಿ ಆ ಮಹಾನದಿಯ ಪ್ರತಾಪ ಸ್ವಲ್ಪ ಅರಿವಾಗೋಕೆ ಶುರುವಾಯಿತು. ಆದರೂ ನಾನು ಸಿಕ್ಕಾಪಟ್ಟೆ ಸೈಲೆಂಟ್. ಒಂದು ದಿನ ಕನ್ನಡ ಕಾಪಿ ಗೆ ಅವಳಿಗಿಂತ ೧ ಮಾರ್ಕ್ ಜಾಸ್ತಿ ಸಿಕ್ಕಾಗ ತರಗತಿ ನಡುವೆ ಓಡಿ ಬಂದು ನನ್ನ ಕಾಪಿ ಬುಕ್ ಕಸಿದುಕೊಂಡು ಹೋದರು. ನಂಗೆ ಭಯ ಆಯಿತು ಅಯ್ಯೋ ಯಾಕೆ ಹೀಗೆ ಮಾಡಿದ್ರು ಅಂತ ? ಆಗ ನನ್ನ ಎಳೆ ಮನಸ್ಸಿಗೆ ಏನೂ ತಿಳಿಯದು .ಇನ್ನೊ೦ದು ಸಲ ಗಣಿತದ ಕಿರು ಪರೀಕ್ಷೆಯಲ್ಲಿ ೧೦೦/೧೦೦ ಬಂದಾಗ ಅವರಿಗೆ ಹೇಳ ತೀರದ ಹೊಟ್ಟೆ ಕಿಚ್ಚು.... ಅಯ್ಯೋ ವಿನು ಗಿಂತ ನಂಗೆ ಜಾಸ್ತಿ ಮಾರ್ಕ್ ಬಂತು ಅಂತ.
೪ ನೇ ತರಗತಿ ಯಲ್ಲಿ ನಾನು ಸಿಕ್ಕಾಪಟ್ಟೆ ಜೋರಾಗಿ ಬಿಟ್ಟೆ, ನನ್ನ ಸರ್ವತೋಮುಖ ಬೆಳವಣಿಗೆ ಅಲ್ಲಿಂದ ಆರಂಭ ಆಯಿತು. ನನ್ನ ತರಗತಿ ಅಧ್ಯಾಪಕರಿಗೆ ನಾನು ಸಿಕ್ಕಾಪಟ್ಟೆ ಇಷ್ಟದ ವಿದ್ಯಾರ್ಥಿ ಹೀಗಾಗಿ ನಾನು ಏನು ಲಾಗ ಹಾಕಿದ್ರೂ ನಡೀತಾ ಇತ್ತು. ಸ್ವಲ್ಪ ಬಾಯಿ ಬಿಟ್ ಮಾತನಾಡೋದು ಕಲಿತೆ. ಜಗಳ ಮಾಡಕ್ಕೂ ಕಲ್ತಿದ್ದು ಅಲ್ಲೇ!! ಇಲ್ಲಿ ರಾಮಾಯಣ ಮಹಾಭಾರತ ಏನು ಆಗ್ಲಿಲ್ಲ ... ಆದರೆ ಪೂರ್ಣ ಪ್ರಮಾಣ ದಲ್ಲಿ ಅವರ ರಾಜಕೀಯ ಅರಿವಿಗೆ ಬಂದಿದ್ದು ನನ್ನ ೭ ತರಗತಿ ದಿನಗಳಲ್ಲಿ, ಅಷ್ಟು ಹೊತ್ತಿಗೆ ಅವರ ಗಂಡನೇ ಶಾಲೆಯ ಹೆಡ್ ಮಾಸ್ಟರ್ ಆಗಿದ್ರು ಇನ್ ಕೇಳ್ಬೇಕಾ ? ಗಂಡ ಹೆಂಡತಿ ೬ ವಿಷಯಗಳಲ್ಲಿ ೩ ನ್ನು ಇಟ್ಕೊಂಡು ಬಿಟ್ರು ಕನ್ನಡ, ವಿಜ್ಞಾನ, ಇಂಗ್ಲಿಷ್. ಮಹಾ ನದಿ ಕನ್ನಡ ,ವಿಜ್ಞಾನ ಇಟ್ ಕೊಂಡರು.ಇಂಗ್ಲಿಷ್ ಗಂಡ ಉಳಿಸಿ ಕೊಂಡರು .
ಅವರು ವಿಜ್ಞಾನ ಆಯ್ಕೆ ಮಾಡಿದಕ್ಕೆ ಬೇಸರ ಇಲ್ಲ ಆದರೆ ತಪ್ಪು ತಪ್ಪು ಪಾಠ ಮಾಡಿ ನಾನು ಹೇಳಿದ್ದೆ ಸರಿ ಎಂದು ವಾದಿಸಿದ್ದು ನೆನಸಿದರೆ ಮನಸ್ಸಿಗೆ ಯಾತನೆ -ಮನುಷ್ಯನ ದೇಹದ ಉಷ್ಣತೆ ನಾನು ೬ ನೆತರಗತಿಯಲ್ಲೇ 98.6 F ಎಂದು ಕಲಿತು ಮನನ ಮಾಡಿ ಕೊಂಡು ಬಂದಿದ್ದೆ. 7ನೇ ತರಗತಿಯ ವಿಜ್ಞಾನ ಪಾಠದಲ್ಲಿ ಆರೋಗ್ಯವಂತ ಮನುಷ್ಯನ ದೇಹದ ಉಷ್ಣತೆ 95 F ಅಂತ ಪ್ರಶ್ನೋತ್ತರ ಬರೆಸಿದಾಗ ನಂಗೆ ತಲೆ ಧಿಂ ಅಂತ ಆಯಿತು. ಪಾಠ ಮಾಡಿದ ದಿನ ನಾನು ತರಗತಿಗೆ ಹೋಗಿರಲಿಲ್ಲ. ಅಯ್ಯೋ ಇದು ಸತ್ತ ಮನುಷ್ಯ ನ ದೇಹದ ಉಷ್ಣತೆ ಅಲ್ವಾ ಅನ್ನಿಸಿತು ಆದರೆ ಕೇಳೋ ದೈರ್ಯ ಇಲ್ಲ. ಪುಸ್ತಕದಲಿ ಎಲ್ಲೋ ಫ್ಯಾರನ್ ಹೀಟ್ ಉಷ್ಣತೆ ಇರ್ಲಿಲ್ಲ ಆದರೆ ಪರೀಕ್ಷೆಯಲ್ಲಿ ಪ್ರಶ್ನೆ ಇರ್ತ ಇತ್ತು. ಮನೆಗೆ ಬಂದು ಎಲ್ಲ ಹಳೆ ನೋಟ್ಸ್ ಅಡ್ಡ ಬಿದ್ದು ಹುಡುಕಿದೆ. ಸಾಕ್ಷಿ ಸಿಕ್ಕಿತ್ತು ಆದರೆ ಇವರು ಒಪ್ಪೋಕೆ ತಯಾರಿಲ್ಲ. ಚಿಕ್ಕಮ್ಮ(ವೈದ್ಯೆ) ನಿಗೆ ಫೋನ್ ಮಾಡಿ ಎಲ್ಲ ಸಂಶಯ ನಿವಾರಿಸಿ ಕೊಂಡು ಕೊನೆಗೆ ಅವರು " ನೋಡು ನಿನ್ನ ಅಮ್ಮಮ್ಮನ ಬಿಪಿ ಚೆಕ್ ಅಪ್ ಮಾಡೋ ಕಿಟ್ ನಲ್ಲಿ ಥೆರ್ಮಾ ಮೀಟರ್ ಇದೆ.ಅದ್ರಲ್ಲಿ ಬರೆದು ಕೊಂಡು ಇರುತ್ತೆ ಅದನ್ನ ಕೊಂಡು ಹೋಗಿ ತೋರಿಸು ಅಂದ್ರು. ಅದೂ ಸಾಲದು ಅಂದ್ರೆ ನಿಂಗೆ ಜ್ವರ ಬಂದಾಗ ನಾನು ಹೀಗೆ ಚೆಕ್ ಮಾಡ್ತಾ ಇದ್ದೆ ಹಾಗೆ ಪ್ರಯೋಗ ಮಾಡಿ ತೋರಿಸು'' ಅಂತ ಹೇಳಿದ್ರು ಎಲ್ಲ ಮಾಡಿದೆ ಆಮೇಲೆ ಕೊನೆಗೆ ತಿದ್ದಿ ಬರೆಸಿದರು.
ಇನ್ನೊ೦ದು ಘಟನೆ ಅವರು ಗಣಿತ ಪಾಠ ಮಾಡೋವಾಗ ಭಾರತ ಜನಸಂಖ್ಯೆ ಅಪರಿಮಿತ ಗಣ ಎಂದು ಮಕ್ಕಳ ಮನದಲ್ಲಿ ಬಿತ್ತಿದ್ದು. ಅದು ಹೇಗೆ ಭಾರತದ ಜನಸಂಖ್ಯೆ ಅಪರಿ ಮಿತ ಗಣ ಆಗೋದು? ಭಗವಂತಾ ಕಾಪಾಡು ಶಿವನೆ ಅವರ ಕೈ ಕೆಳಗೆ ಕಲಿಯೋ ಮಕ್ಕಳ ಪಾಡು ..... ಎಲ್ಲರೂ ಹುಟ್ಟುತಲೇ ಎಲ್ಲಾ ವಿಷಯಗಳನ್ನು ಕಲಿತು ಬಂದಿರುವುದಿಲ್ಲ . ಆದರೆ ತರಗತಿಗೆ ಪಾಠ ಮಾಡಲು ಹೋಗುವ ಮೊದಲೇ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು ಹೋಗದಿರುವುದು ಎಷ್ಟು ಸರಿ? ಇಷ್ಟೇ ಅಲ್ಲ ಶಾಲೆ ಯಲ್ಲಿ ಸಿಕ್ಕ ಪಟ್ಟೆ ಗುಂಪುಗಾರಿಕೆ ಮಾಡಲಾಗುತ್ತಾ ಇತ್ತು. ಪಾಠ ಮಾಡೋ ಸಮಯದಲ್ಲಿ ಈ ಮಹಾನದಿ ಪಕ್ಕದ ತರಗತಿ ಶಿಕ್ಷಕಿಯ ಜೊತೆ ಸಿಕ್ಕಪಟ್ಟೆ ಮಾತನಾಡ್ತಾ ಇದ್ದಿದನ್ನು ನಾನೇ ಎಷ್ಟೋ ಸಲ ಕಣ್ಣಾರೆ ಕಂಡಿದ್ದೆ. ಅಲ್ಲಿಗೆ "ಕಳ್ಳ ಹೊಕ್ಕರೆ ಮನೆ ಹಾಳು ಕೋತಿ ಹೊಕ್ಕರೆ ವನ ಹಾಳು ಅನ್ನೋ ಹಾಗೆ ಇದೇ ಶಾಲೆಯ ವಾತಾವರಣ ಹಾಳು ಮಾಡ್ತಾ ಇದ್ರು .ಇದನ್ನು ಯಾರೂ ಪ್ರಶ್ನಿಸುವಂತೆ ಇಲ್ಲ ಮುಖ್ಯೋಪಾಧ್ಯಾಯರೇ ಅವರ ಪತಿ ರಾಯ...
ಇಷ್ಟೆಲ್ಲಾ ಅದರೂ ಏನೇನೋ ಕರಾಮತ್ತು ಮಾಡಿ ಅವರ ಮಗಳೇ ೭ನೇ ತರಗತಿಯಲ್ಲಿ ಮೊದಲಿಗಳಾಗಬೇಕೆಂಬ ದುರಾಸೆ ...೩ ಪೇಪರ್ ಸಿಕ್ಕ ಮೇಲೆ ಉಳಿದ ೩ ಪೇಪರ್ ಕೊಡುವುದು, ಅಲ್ಲಿ ಬೇಕೆಂದೇ ಅಂಕಗಳನ್ನು ಕಡಿತ ಮಾಡುವುದು ,ಹೀಗೆ ಸಾಗಿತ್ತು ರಾಜಕೀಯ... ಆದರೆ ನಮಗೆ ಆಗ ೭ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇದ್ದುದರಿಂದ ಅವರ ಯಾವ ಆಟವೂ ನಡೆಯಲಿಲ್ಲ . ಕನ್ನಡದಲ್ಲಿ ಪ್ರಬಂಧ ಬರೆಯುವಾಗ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಹೆಸರು / ಶಾಲೆಯ ಹೆಸರು ಬರೆಯ ಕೂಡದು ಎಂಬ ಕನಿಷ ಜ್ಞಾನವೂ ಅವರಿಗೆ ಇಲ್ಲದೆ ಹೋಯಿತು ಎಂದು ನಂಗೆ ತಿಳಿದುದು ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು ಹೀಗೆ ಬರೆಯ ಬಾರದು ಮಗು ಎಂದು ಎಚ್ಚರಿಸಿದಾಗಲೇ !!! ನಾನು ಮಾತ್ರ ಅಲ್ಲ ಎಲ್ಲರೂ ಅವರವರ ಹೆಸರು ಬರೆದು ಪ್ರಬಂದ ಮುಗಿಸಿದ್ದರು. ಅಲ್ಲಿಗೆ ಮೇಲ್ವಿಚಾರಕರಿಗೆ ತಿಳಿಯಿತು ಓಹ್ !! ಈ ಮಕ್ಕಳಿಗೆ ಹೇಳೇ ಇಲ್ಲ ಅದಿಕ್ಕೆ ಎಲ್ಲವೂ ತಮ್ಮ ಹೆಸರು ಶಾಲೆ ಹೆಸರು ಮುದ್ದಾಗಿ ಬರೆದು ಬಿಟ್ಟಿವೆ ಅಂತ.
ಇಷ್ಟೆಲ್ಲಾ ಆದಮೇಲೆ ಅವರ ಎಲ್ಲ ಪ್ರಯತ್ನ ನೀರಲ್ಲಿ ಮಾಡಿದ ಹೋಮ ಮೊದಲ ಎರಡೂ ಸ್ಥಾನಗಳು ನಾನು ಹಾಗೂ ನನ್ನ ಸಹಪಾಠಿಯ ಪಾಲಾಯಿತು. ವಿನುವಿಗೆ ೩ ಸ್ಥಾನ ದೊರೆತಾಗ ಅವರಿಗೆ ಏನೂ ಮಾಡೋಕೆ ಆಗದೆ ನಂಗೆ ಒಂದು ಮಾತಿನಲ್ಲಿ ಹೇಳೇ ಬಿಟ್ರು ವಿನುವನ್ನು ನೀನು ವಿಜ್ಞಾನದಲ್ಲಿ ಹೊಡೆದು ಬಿಟ್ಟೆ ಅಂತ ನಂಗೆ ೧೦೦ಕ್ಕೆ ೯೭ ಬಂದಿತ್ತು. ನಾನು ಅಷ್ಟು ಹೊತ್ತಿಗೆ ಸಕತ್ ಕಿಲಾಡಿ ಆಗಿ ಹೋಗಿದ್ದೆ. ಅಯ್ಯೋ ಅದು ನೀವೇ ಮಾಡಿದ ಪಾಠ ಅಲ್ವೇ ಟೀಚರ್ ?ನ೦ಗೆ ಬೇರೆ ವಿನು ಬೇರೆ ಮಾಡಿದ್ರ?? ಅಂದೆ. ಏನೂ ಹೇಳೋಕೆ ಆಗದೆ ಸುಮ್ಮನಾದರು ನಾನು ಮಾತ್ರ ಅವರ ನೋಟ್ಸ್ ಓದಲೇ ಇಲ್ಲಾ ನಾನು ನನ್ನ ಕಸಿನ್ ನ ಪ್ರಶ್ನೋತ್ತರ ರೆಫರ್ ಮಾಡಿದ್ದೆ. ಅವರ ಮನುಷ್ಯನ ದೇಹದ ಉಷ್ಣತೆ ಪಾಠ ನಂಗೆ ಒಳ್ಳೆ ಬುದ್ದಿ ಕಲಿಸಿತ್ತು .... ಹೀಗಾಗಿ ೯೭ ಬಂತು ಅನ್ನೋ ನಂಬಿಕೆ ಈಗಲೂ ಇದೆ ಮನಸಲ್ಲಿ .....
ಇಂತಹ ಶಿಕ್ಷಕರಿಂದ ಯಾವ ಗುಣ ಮಟ್ಟದ ಶಿಕ್ಷಣ ಸಿಗಬಹುದು ????? ಯೋಚಿಸಿ ...
1 comment:
very nice....
Post a Comment