Monday, March 25, 2013

ಚಿನ್ನು ಮತ್ತು ಅವನ ಜೀವನ --- 3


ಅಂದು ಭಾನುವಾರ ಬೆಳಗ್ಗೆ ತಿಂಡಿ ಆದ ಮೇಲೆ ಏನೋ ಒಂದಿಷ್ಟು ಮನೆಮದ್ದಿಗೆ ಬೇಲಿ ಬದಿ ಸೊಪ್ಪು ಬೇಕು ಎಂದು ತರೋಕೆ ಹೊರಟೆ. ಅದಾಗಲೇ ನಾನು ಎಲ್ಲಿ ಹೋದರೂ ನನಗಿಂತ ಮುಂಚೆ ಅವ ತಯಾರು , ಇರಲಿ ಕೂಡಿ ಹಾಕುವ ಪದ್ಧತಿ ಇಲ್ಲ , ನಗೆ ಇಷ್ಟ ಆಗಲ್ಲ ಸರಿ ಬರಲಿ ಅಂತ ಬಿಟ್ಟೆ. ಗದ್ದೆಬದಿಯಲ್ಲಿ ನಡೆದು ಕೊಂಡು  ಹೋಗುವಾಗ ಅವನಿಗೆ ಒಂದು ನಾಯಿ ದೂರದಲ್ಲಿ ಬರುತ್ತಿರುವುದು ಕಾಣಿಸಿತು. ನಾನು ಅವನನ್ನು ಎತ್ತಿ ಕೊಳ್ಳುವುದಕ್ಕೂ ಮುಂಚೆ  ಅವನು ಅವಸರದಿಂದ ಬದಿಯಲ್ಲಿ ಇದ್ದ ಮರ ಹತ್ತಿದ. ನಾಯಿ ತನ್ನ ಪಾಡಿಗೆ ಹೋಯಿತು. ಇಳಿಯೋ  ಕೆಳಗೆ ಅಂದ್ರೆ ಇಳಿಯಲಿಲ್ಲ. ಇಳಿ  ಕೆಳಗೆ ಎಂದು ಜೋರು ಮಾಡಿದಾಗ ಮೆಲ್ಲ ಇಳಿಯೋಕೆ ಪ್ರಾರಂಭ ಮಾಡಿದ. ಅರ್ಧ ಇಳಿತಾ ಇದ್ದನೋ ಏನೋ ಅಷ್ಟರಲ್ಲಿ ಆಯತಪ್ಪಿ ಉತ್ತು ಬಿಟ್ಟಿದ್ದ ಕೆಸರು ಗದ್ದೆಗೆ ಬಿದ್ದೆ ಬಿಟ್ಟ. ಥೂ ದಪ್ಪ ದಪ್ಪ ಕೆಸರು ! ಅವನ ಮೈ ಕೈಕಾಲು ಎಲ್ಲ ಕೆಸರು ಮೆತ್ತಿಕೊಂಡಿತು. ನಾನೇ ಕೆಸರು ಗದ್ದೆಗೆ ಇಳಿದು ಅವನ ಹೊತ್ತು ಮನೆಗೆ ತಂದು, ಮೆತ್ತಿದ  ಕೆಸರು ಹೇಗೆ ತೆಗೆಯೋದು ಅಂತ ಯೋಚಿಸಿ ಬಟ್ಟೆ ತಂದು ಒರಸಿದೆ . ಕೆಸರಿನ ವಾಸನೆ ಮಣ್ಣು ನಂಗೆ ಸಮಾಧಾನ ಇಲ್ಲ . ಸ್ನಾನಕ್ಕೆ ಇಟ್ಟ ಬಿಸಿ ನೀರು ಇತ್ತು. ಅದನ್ನೇ ಬಕೆಟ್ ಗೆ ಹಾಕಿ ಸ್ವಲ್ಪ  ತಣ್ನೀರು ಹಾಕಿ ಹದಮಾಡಿ ಹೊಸ ಸೋಪ್  ಸಣ್ಣ ತುಂಡು ಮಾಡಿ ಚಿನ್ನು ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿಯೇ ಬಿಟ್ಟೆ . ಅವನ ಮೈ ರ್ಮೆಲಿನ ಕೊದಲೆಲ ನೀರಿನಲ್ಲಿ ತೊಪ್ಪೆಯಾಗಿ ವಿಕಾರವಾಗಿ ಕಂಡಾಗ ತುಂಬಾ ಬೇಜಾರು ಆಯಿತು . ಇರಲಿ ಎಂದು ಮೈ ಒರಸಿ ಬಿಸಿಲಿನಲ್ಲಿ ಅವನನ್ನು ಒಣಗಿಸಿದ್ದೂ ಆಯಿತು . ಇಷ್ಟಾದಾಗ  ಅಮ್ಮ ಬಂದರು "ಏನು ಮಾಡಿದೆ ಬೆಕ್ಕಿಗೆ ?" ಅಮ್ಮನ ಪ್ರಶ್ನೆ ನಂಗೆ .
      ಅಯ್ಯೋ ದೇವರೇ!!! ಬೆಕ್ಕಿಗೆ ಯಾರಾದ್ರೂ ಸ್ನಾನ ಮಾಡಿಸ್ತಾರ ? ಬೆಕ್ಕಿಗೆ ಚಳಿ ಆಗಲ್ವಾ? ನೋಡು ನಿನ ಬೆಕ್ಕಿಗೆ ನಾಳೆ ಏನಾಗುತ್ತೆ ಎಂದು . ನಾನು  ನೇರ  ಕೇಳಿದೆ ಅಲ್ಲ ಅಮ್ಮ ಅವನು ಕೆಸರು ಗದ್ದೆಯಲ್ಲಿ ಬಿದ್ದ ಮೈ ಎಲ್ಲ ಕೆಸರು ಮತ್ತೆ ಹೇಗೆ ಅವನನ್ನು ಶುಚಿ ಗೊಳಿಸೋದು ? ಅದಿಕ್ಕೆ ಬಿಸಿ ನೀರಿನಲ್ಲಿ ಸೋಪು ಹಚ್ಚಿ ಸ್ನಾನ ಮಾಡಿಸಿದೆ. ಮೈ ಒರಸಿ ಬಿಸಿಲಿನಲ್ಲಿ ಒಣಗಿಸಿಯೂ ಆಯಿತು ಅಂದೆ. ಅವನೇನು ಪಾಪ ಮಾಡಿ ನಮ್ಮ ಮನೆಗೆ ಬಂದನೋ ಏನೋ ನಿನ್ನ ಕೈಗೆ ಯಾಕೆ ಸಿಕ್ಕಿ ಹಾಕಿ ಕೊಂಡನೋ ಭಗವಂತ ಕಾಪಾಡು ಎಂದು ನಂಗೆ ಇನ್ನೊಮ್ಮೆ ಎಲ್ಲಾದರು ಬೆಕ್ಕಿಗೆ ಸ್ನಾನ
ಮಾಡಿಸಿದೆಯೋ ನಿನ್ನ ಬೆನ್ನ ಚರ್ಮ ಸುಲಿದು ಹಾಕುವೆ ಜೋಕೆ ಎಂದು ಎಚ್ಚರಿಸಿದರು . ಮೈ ಕೆಸರಾಗಿದ್ದರೆ ಬೆಕ್ಕು ಮೈ ಕೈ ನೆಕ್ಕಿ ಸ್ವಚ್ಛ ಮಾಡಿ ಕೊಳ್ಳುತ್ತೆ. ಸ್ನಾನ ಮಾಡಿಸುವ ಅಗತ್ಯ ಇರ್ಲಿಲ್ಲ . ನಂದೊಂದು ಪ್ರಶ್ನೆ ಅಷ್ಟು ಕೆಸರು ಅವನ ಹೊಟ್ಟೆಗೆ ಹೋದ್ರೆ ಅವನಿಗೆ ಆರೋಗ್ಯ ಹಾಳಾಗಲ್ವಾ ಅಮ್ಮ ?  ಅಮ್ಮ ಪ್ರತಿಯಾಗಿ ಅವ ಬೆಕ್ಕು ಕಣೆ ಸಣ್ಣ ಮಗು ಅಲ್ಲ ಅಂದ್ರು . ಏನೋ ಅಮ್ಮ ಅದೆಲ್ಲ ಗೊತ್ತಿಲ್ಲ ಅವನ ಹೊಟ್ಟೆಗೆ ಅಷ್ಟು ಕೆಸರು ಹೋಗಿದ್ರೆ ಖಂಡಿತ ಹೊಟ್ಟೆ ಹಾಳಾಗ್ತಾ ಇತ್ತು ಅಂದು ಸುಮ್ಮನಾದೆ . ಅಮ್ಮ ತುಂಬ ಕುತೂಹಲ ದಿಂದ  ಅಲ್ವೇ ನೀನು ಸ್ನಾನ ಮಾಡಿಸುವಾಗ ನಿಂಗೆ ಪರಚಲಿಲ್ವಾ ಓಡಿ  ಹೋಗಿಲ್ವಾ ಅಂದ್ರು ?   ಇಲ್ಲ ಸ್ವಲ್ಪ ಗಲಾಟೆ ಮಾಡಿದ ಅಷ್ಟೇ ಅಂದೆ . ನನ್ನ ಪುಣ್ಯಕ್ಕೆ ಚಿನ್ನು ಸ್ನಾನ ಮಾಡಿದ ಪರಿಣಾಮವಾಗಿ ಆರೋಗ್ಯ ಹಾಳಾಗದೆ ಸಾಮಾನ್ಯವಾಗಿಯೇ ಇದ್ದ . 
           ದಿನ ಕಳೆದಂತೆ ಬೆಳೆದ ಅವನು ಪಕ್ಕದ ಮನೆಗೆ ಪೂಜೆ ಸಮಯಕ್ಕೆ ಹಾಜರ್ ! ಅವನಿಗೆ ಅರಳು ತಿನ್ನೋ ಆಸೆ ಅಲ್ಲಿ ಪೂಜೆ ಬಳಿಕ ಒಂದು ಹಿಡಿ ಅರಳು ಕಾಗೆಗೆ ಎಂದು ತುಳಸಿ ಕಟ್ಟೆಯ ಹೊರಗ ಹಾಕುತ್ತಿದ್ದರು. ಅಯ್ಯಬ್ಬಾ!!! ಘಂಟೆ ಶಬ್ದ ಕೇಳಿದ್ರೆ ಸಾಕು ಎದ್ದು ಬಿದ್ದು ಪೂಜೆ ಮುಗಿಯುವ ಮೊದಲು ಓಡುತ್ತಿದ್ದ. ಬೇರೆ ಬೇರೆ ಮನೆ ಘಂಟೆ ಶಬ್ದಕ್ಕೆ ಎಂದೂ ಓಡಿದವನಲ್ಲ. ನಂಗೆ ಮೊದಲು ಇದು ಗೊತ್ತಿರಲಿಲ್ಲ ಒಂದು ದಿನ ನಾನು ಬೇಗನೆ ಶಾಲೆಗೇ ಹೋಗುವ ಸಂದರ್ಭ ಇತ್ತು . ಹಿಂದಿನ ದಿನ ನನ್ನ ಪ
ಠ್ಯ ಪುಸ್ತಕ ಬೇಕೆಂದು ಆ ಮನೆ ಹುಡುಗಿ ಕೊಂಡು  ಹೋಗಿದ್ದಳು. ಕನ್ನಡ ತರಗತಿಯಲ್ಲಿ ಪಠ್ಯ  ಪುಸ್ತಕ ಇಲ್ಲದೆ ಇದ್ರೆ ನಮ್ಮ ಟೀಚರ್  ಕ್ಲಾಸ್ ನಲ್ಲಿ ಕೂರೋಕೆ ಬಿಡ್ತಾ ಇರಲಿಲ್ಲ ಹೀಗಾಗಿ ಪುಸ್ತಕ ಮರಳಿ ತರಲು ಹೋದಾಗ ಚಿನ್ನು ಅಲ್ಲಿ ಅರಳು ಭಕ್ಷಣೆಯಲ್ಲಿ  ನಿರತ ! ಅದೂ ಕಾಗೆಗಳನ್ನು ಓಡಿಸಿ ಓಡಿಸಿ  ಆಯ್ದು ಕೊಂಡು ತಿನ್ನುತಿದ್ದ. ಆ ಮನೆಯವರಿಗೆ ಬೆಕ್ಕು ಕಂಡರೆ ಸ್ವಲ್ಪವೂ ಇಷ್ಟ ಇರಲಿಲ್ಲ ಆದರೂ ನನ್ನ ಚಿನ್ನು ಅಲ್ಲಿ ವಿಶೇಷ ಸ್ಥಾನ  ಗಿಟ್ಟಿಸಿಕೊಂಡಿದ್ದ. ಅರಳು ತಿಂದು ಮನೆ ಅಟ್ಟದ ಮೇಲೆ ಹೋಗಿ ಇಲಿ ಓಡಿಸಿ ಬರುತ್ತಿದ್ದ  ಅಂತೆ.
         ಚಿನ್ನು ಗೆ ಇಡ್ಲಿ, ದೋಸೆ , ಆಲೂಗಡ್ಡೆ , ಗೆಣಸು ಅಂದ್ರೆ ಪ್ರಾಣ. ಅವನ ಇಡ್ಲಿ, ದೋಸೆ ಪ್ರೀತಿಯ ಪ್ರಸಂಗ ನಂಗೆ ಈಗಲೂ ದೋಸೆ ಇಡ್ಲಿ ಮಾಡೋವಾಗ ಪ್ರತಿ ಸರಿ ಕಾಡುತ್ತೆ . ಇಡ್ಲಿ ದೋಸೆಗೆ ರುಬ್ಬುವಾಗಲೇ  ಅವನ ಸೂಕ್ಷ್ಮ ಗ್ರಾಹಿ ಮೂಗಿಗೆ ತಿಳಿದು ಹೋಗುತ್ತಿತ್ತು. ಎಲ್ಲಿ ತನಗೆ ಕೊಡದೆ ತಿನ್ನುವರೋ ಎಂಬ ಆತಂಕ ಹಿಟ್ಟು ರುಬ್ಬಿ ಇಟ್ಟಬಳಿಕ ಆಗಾಗ ಅಡುಗೆ ಮನೆಗೆ ಬಂದು ನೋಡಿ ಕೊಂಡು  ಹೋಗುತ್ತಿದ್ದ. ಮಾರನೇ ದಿನ ಇಡ್ಲಿ ಬೇಯಲು ಇಡಲು ಅಮ್ಮ ತಟ್ಟೆಯಲ್ಲಿ ಹೊಯ್ಯುವಾಗಲೇ ಬಂದು ನೋಡಿ ದೂರದಲ್ಲಿ ಕೂತು ಬಿಟ್ಟರೆ, ಇಡ್ಲಿ ಬೆಂದು ಅವನ ಹೊಟ್ಟೆ ತುಂಬಿದ ಮೇಲೆಯೇ  ಅಲ್ಲಿಂದ ಅವನು ಕದಲೋದು. ಅಲ್ಲಿ ವರೆಗೆ  ಸುಮ್ಮನೆ ಉಯ್ ಉಯ್ ಶ್ರುತಿ ಹೊರಡಿಸಿಕೊಂಡು ಒಂದು ಬದಿಯಲ್ಲಿ ಕುಳಿತುಕೊಳ್ಳುತ್ತಿದ್ದ. ಇಷ್ಟೆಲ್ಲಾ ಆದರೂ ಒಂದು ದಿನ ಅವನು ಕದ್ದು ಏನನ್ನು ತಿಂದಿದ್ದೇ  ಇಲ್ಲ. ಅವನಿಗೆ ಬೇಕಾಗಿದ್ದನ್ನು ಅನುನಯದಿಂದ,  ಪ್ರೀತಿಯಿಂದ ಗಿಟ್ಟಿಸಿ ಕೊಳ್ಳುತ್ತಿದ್ದ. ಪ್ರೀತಿಗೆ ಮನ ಸೋಲದವರು ಯಾರಾದರೂ ಇದ್ದಾರಾ?   
      ಇವತ್ತು ಕೊರೆದಿದ್ದು ಜಾಸ್ತಿ ಆಯಿತು ಇನ್ನು ಉಳಿದಿದ್ದು ನಾಳೆಗೆ ಇರಲಿ .... 
 ನಾನು ವಿಲಿ ವಿಲಿ ಒದ್ದಾಡುವಾಗ ಅವನ ಪ್ರತಿಕ್ರಿಯೆ ಹಾಗೂ ಅಮ್ಮ ಮನೆಗೆ ಬಂದಾಗ ಅದನ್ನು ಚಿನ್ನು ತನ್ನ  ಭಾಷೆಯಲ್ಲಿ ಅಮ್ಮನಿಗೆ ವರದಿ ಮಾಡಿದ ಪರಿ ನಾಳೆಗೆ ಇರಲಿ 
 

1 comment:

padmapani said...

nimma articles odi naanu bekku prema belesikoltha ideeni annuva aathanka shuruvaagide