ನಾನು ಸೋಮಾರಿ, ಆದ ಕಾರಣ ನಂಗೆ ಅಲಾರಂ ಇಲ್ಲದೆ ತುಂಬಾ ಕಷ್ಟ . ಹೀಗಾಗಿ ಅಲಾರಂ ಇಟ್ಟು ಮಲಗಿಕೊಳ್ಳುತ್ತಿದ್ದೆ. ಉಳಿದಂತೆ ಓಡಿದ್ದು ಬರೀ ಕಾದಂಬರಿಗಳೇ ! ಪರೀಕ್ಷೆಗೆ ಸಮಯ ಹತ್ತಿರ ಬರುವಾಗಲೇ ಶಾಲೆಯ ಪುಸ್ತಕ ಓದಿ ಕೊಳ್ಳೋದು. ಮೊದಲು ಓದುವ ಜಾಯಮಾನ ಇರಲಿಲ್ಲ. ಹೀಗಾಗಿ ಬೆಳಗ್ಗೆ 5 ಕ್ಕೆ ಅಲಾರಂ ಇಟ್ಟು ಏಳುತ್ತಿದ್ದೆ. 2 -3 ದಿನ ಅಷ್ಟೇ ಆಗಿತ್ತು . ಚಿನ್ನು ನನ್ನ ಜೊತೆಗೆ ಎದ್ದು ನಾನು ಓದುವಾಗ ಮಡಿಲಲ್ಲಿ ಕೂತು ಕೊಳ್ಳುತ್ತಿದ್ದ . ಚಿನ್ನು ನನ್ನ ಜೊತೆಗೆ ಮಲಗೋದು ಸಾಮಾನ್ಯವಾಗಿತ್ತು. ಒಂದು ದಿನ ನನ್ನ ಹೊದಿಕೆ ಎಳೆದು,ಕಿವಿ ಹತ್ತಿರ ಬಂದು ಮಿಯಾವ್ ಮಿಯಾವ್ ಎಂದು ಮೆಲು ದನಿಯಲ್ಲಿ ನನ್ನ ಎಬ್ಬಿಸಿದ . ಅವನು ನನ್ನ ಎಬ್ಬಿಸುವುದು ನಂಗೆ ಹೊಸದೇನು ಅಲ್ಲ . ಅವನಿಗೆ ರಾತ್ರಿ ಮಲಗಿದ ಮೇಲೆ ನೈಸರ್ಗಿಕ ಕರೆಗೆ ಹೋಗಬೇಕು ಎಂದು ಅನ್ನಿಸಿ ಅವ ನನ್ನ ಎಬ್ಬಿಸೋದು ನಂಗೆ ರೂಢಿಯಾಗಿತ್ತು .
ಅಂದು ಎಬ್ಬಿಸಿದ , ಎದ್ದೆ ಬಾಗಿಲು ತೆರೆದು ಕೂತೆ ಅವನೂ ನನ್ನ ಎದುರು ಕೂತ.
ನಾನೆಣಿಸಿದಂತೆ ಅವನು ನೈಸರ್ಗಿಕ ಕರೆಗೆ ಹೋಗಲಿಲ್ಲ . ಎಲಾ ಇವನಾ !!!!!! ನನ್ನ ನಿದ್ದೆ
ಹಾಳು ಮಾಡಿದ ಅಂತ ಬೈದುಕೊಂಡು ಬಂದು ಮಲಗೋಕೆ ಹೋದರೆ ... ಅಲ್ಲಿ ಕುಕ್ಕೂ ....
ಕುಕ್ಕೂ ಅಲಾರಂ ಮೊಳಗ್ತಾ ಇದೆ . ಉಫ್ ಫ್ .. ಆವನು ನನ್ನನ್ನು ಅಲಾರಂ ಆಗೋ ಮೊದಲೇ
ಎಬ್ಬಿಸಿದ್ದ ಸುಮಾರು 4.50 ರ ಸುಮಾರಿಗೆ ! ಮಾರನೇ ದಿನ ದಿನದಿಂದ 4.50 - 5 ಘಂಟೆಯೊಳಗೆ
ತಪ್ಪದೇ ನನ್ನ ಎಬ್ಬಿಸುತ್ತಿದ್ದ. ಒಂದು ವಾರ ಇದೇ ನಡೆದುದು ನೋಡಿ ಅಲರಾಂ ಇಡೋದೇ
ಬಿಟ್ಟು ಬಿಟ್ಟೆ. ಅವನು ತಪ್ಪದೆ ನನ್ನ ಎಬ್ಬಿಸಿದ್ದ . ಅಲಾರಂ ಮೊಳಗದೆ ಇರೋದು ನೋಡಿ
ಅಮ್ಮ 'ಏನೇ ಸೋಮಾರಿ ಅಲಾರಂ ಆಫ್ ಮಾಡಿ ಮಲಗ್ತೀಯಾ ' ಅಂತ ನಾಮಾರ್ಚನೆ ಶುರು ಮಾಡಿದರು .
ನಾನು ನಕ್ಕು ಹೇಳಿದೆ , ಅಲಾರಂ ಆದರು ಕೆಟ್ಟು ಹೋದೀತು, ಆಫ್ ಮಾಡಬಹುದು . ಚಿನ್ನುನ
ಮಿಯಾವ್ ಮಿಯಾವ್ ಅಲರಾಂ ನನ್ನ ಮಲಗೋಕೆ ಬಿಡೋಲ್ಲ ಅಂದೆ.
ಶನಿವಾರ, ಭಾನುವಾರಗಳಂದು ಈ ಸೋಂಬೇರಿ ಮಲಗೋದು ತಪ್ಪಿಸಿ ಕೊಳ್ಳೋದೇ
ಇಲ್ಲ . ನಾನು ಮದ್ಯಾಹ್ನ ಮಲಗಿದರೆ ಕುಂಭಕರ್ಣನ ಅಪರಾವತಾರ, ಅಮ್ಮ 4.45 ರ ಸುಮಾರಿಗೆ
ಹಾಲು ಬಿಸಿ ಮಾಡಿ , ಅವರಿಗೆ ಕಾಫಿ ಮಾಡಿಕೊಂಡು, ಚಿನ್ನುಗೂ ಹಾಲು ಹಾಕಿ ನಂಗೆ ಹಾಲು ತೆಗೆದು ಕರೆಯೋಕೆ ಶುರು ಮಾಡಿದರೆ ನಂಗೆ ಏಳೋಕೆ ಬೇಜಾರು. 'ಏಳೇ' ಅಂತ ಅಮ್ಮ ಕೂಗಿದ್ದು ಕೇಳಿ ಎಚ್ಚರ ಆದರೂ ಮತ್ತೆ ಮಗ್ಗುಲು ಬದಲಿಸಿ ಮಲಗೋ "ಧಿಗ್ಗಡ್ ಧಿಮ್ಮಿ"ನಾನು ! ಅಮ್ಮ
2- 3 ಸಲ ಕರೆದರೂ ನಂಗೆ ಏಳೋದು ಸಾಧ್ಯವೇ ಇಲ್ಲ. ಸೋಮಾರಿತನ ಏಳೋಕೆ ಬಿಡೋದು ಇಲ್ಲ.
ಇದನ್ನು ಚಿನ್ನುಗೆ ನೋಡಿ ಸಹಿಸೋಕೆ ಆಗದೆ ಅವನು ಕಿವಿ ಹತ್ರ ಬಂದು ಮಿಯಾವ್ ಮಿಯಾವ್ ಎಂದು , ತನ್ನ ಮೆತ್ತನೆಯ ಕೈಯಿಂದ ಕೆನ್ನೆ ತಟ್ಟಿ ತಟ್ಟಿ ಎಬ್ಬಿಸುತ್ತಿದ್ದ . ಮಗ್ಗುಲು ಬದಲಿಸಿದರೆ ಅಲ್ಲೂ ಬಂದು ಕೆನ್ನೆ ತಟ್ಟಿ ತಟ್ಟಿ
ಏಳೋ ವರೆಗೂ ಕಾಡಿ ಎಬ್ಬಿಸಿಯೇ ಬಿಡುತ್ತಿದ್ದ. ನಾನು ಎದ್ದು ಓದಿ ಪರೀಕ್ಷೆಯಲ್ಲಿ ಅಂಕ
ಪಡೆದರೆ ಅವನಿಗೇನು ಲಾಭ ? ಅದೆಲ್ಲ ಗೊತ್ತಿಲ್ಲ ಅಂತೂ ನನ್ನ ಸಮಯಕ್ಕೆ ಸರಿಯಾಗಿ ಎಬ್ಬಿಸಿ ಒಂದಿಷ್ಟು ಓದಿಸ್ತಾ ಇದ್ದ. ಪರೀಕ್ಷೆ ಮುಗಿದ ಮೇಲೂ ಬೆಳಗ್ಗೆ ತಪ್ಪದೆ ಎಬ್ಬಿಸುತ್ತಿದ್ದ . ಆಗ "ಚಿನ್ನು ನನ್ನ ಪರೀಕ್ಕ್ಷೆ ಮುಗಿದಿದೆ ಕಣೋ ಮಲಗೋ ನೀನು "..... ಎಂದು ಅವನನ್ನು ತಟ್ಟಿ ಮಲಗಿಸಿದ್ದು ಇನ್ನೂ ಬೆಚ್ಚಗಿನ ನೆನಪು.....
ನಾಳೆ ಚಿನ್ನುವಿನ ದಂತಕತೆ ಅಲ್ಲಿವರೆಗೆ ಸಣ್ಣ ವಿರಾಮ ...


2 comments:
chinnu anno live alarm kate chennagide.
ನಿಜಕ್ಕೂ ಕುತೂಹಲಕಾರಿ ವಿಷಯ. ಎಂದಿನಂತೆ ನಿಮ್ಮದು ಸರಳ,ಮನೋಜ್ಞ ನಿರೂಪಣೆ. ಇಷ್ಟವಾಯಿತು
Post a Comment