Tuesday, March 26, 2013

ಚಿನ್ನು ಮತ್ತು ಅವನ ಜೀವನ--4

    ಅಂದು ಶಾಲೆಗೆ ರಜೆ ಇತ್ತು . ಬೆಳಗ್ಗೆ ಅಮ್ಮ ಇಡ್ಲಿ ಮಾಡಿದ್ದರು. ಇಡ್ಲಿ ಅಂದ್ರೆ ಕೇಳ್ಬೇಕಾ ? ಚಿನ್ನು ಆದಿನ ಮೊಕ್ಕಾಂ ಹೂಡಿ ಮನೆಯಲ್ಲೇ ಇರ್ತಾನೆ. ಹೊರಗೆ ಹೋಗೋದೇ ಇಲ್ಲ. ಅವನಿಗೆ ಇಡ್ಲಿ ಅಂದ್ರೆ ಎಷ್ಟು ಪ್ರಾಣ ಅಂದ್ರೆ ಇಡ್ಲಿ  ಮುಗಿಯುವ ವರೆಗೆ ಅನ್ನ ತಿನ್ನೋದೇ ಇಲ್ಲ, ಮನೆ ಬಿಟ್ಟು ಕದಲೋದು  ಇಲ್ಲ .  ಇಷ್ಟೇ ಅಲ್ಲ! ಇಡ್ಲಿ ಹಾಕದೆ  ಅನ್ನ  ಅವನ ತಟ್ಟೆಯಲ್ಲಿ ಕಂಡರೆ ಬಾಲ ಆಡಿಸುತ್ತ ಅವನದೇ ಭಾಷೆಯಲ್ಲಿ ಏನೋ ಕೇಳುತ್ತಿದ್ದ. ಇಡ್ಲಿ ಇಲ್ಲ ಮುಗಿಯಿತು ಅಂದ್ರೆ ಅವಾ ಅನ್ನ  ತಿನ್ನೋದೇ ಇಲ್ಲ , ಅವನು ಅನ್ನತಿನ್ಬೇಕಿದ್ರೆ ಇಡ್ಲಿ ಮಾಡಿದ ಖಾಲಿ ಪಾತ್ರೆ ತೋರಿಸಿದರೆ ಅದನ್ನು ಇಣುಕಿ ನೋಡಿ ಓಹೋ ಇಡ್ಲಿ ಮುಗಿದಿದೆ ಎಂದು ಅರ್ಥೈಸಿ ಕೊಂಡು ಅನ್ನ  ಉಣ್ಣುವುದಕ್ಕೆ  ಪ್ರಾರಂಭಿಸುತ್ತಿದ್ದ. ಖಾಲಿ ಪಾತ್ರೆ ತೋರಿಸಿ ಅವನಿಗೆ ಎಂದೂ ನಾವು  ಮೋಸವೂ ಮಾಡಲಿಲ್ಲ. ಅಮ್ಮ ಅವನಿಗೆ ಎಂದೇ ಇಡ್ಲಿ ತೆಗೆದು ಇರಿಸಿದ್ದೂ ನೆನಪಿದೆ.
         ಹೀಗೆ ಇಡ್ಲಿ ತಿಂದು ಮನೆಯಲ್ಲೇ ಸುತ್ತಾಡಿಕೊಂಡಿದ್ದ ಅಮ್ಮ ಬ್ರಾಹ್ಮೀ ( ಒಂದೆಲಗ ) ತರಲು ಎಂದು ಗದ್ದೆ ಕಡೆ ಹೋಗಿದ್ರು. ನಾನು ಮನೆಯಲ್ಲಿ ಕೂತು ಓದುವುದರಲ್ಲಿ  ಇದ್ದೆ. ಅಮ್ಮ ಬಾಗಿಲು ಹಾಕಿಕೋ ನೀನು  ಓದೋಕೆ ಕೂತರೆ ಮನೆ ಒಳಗೆ ನಾಯಿ ಹೊಕ್ಕರೂ ಗೊತ್ತಾಗಲ್ಲ ಅಂತ ಹೇಳಿ ಹೋದರು. ಸರಿ ಎಂದು ಚಿಲಕ ಹಾಕಿ ನನ್ನ ಯಥಾ ಸ್ಥಾನ  ಸೇರಿ  ಓದುತ್ತ ಇದ್ದೆ . ಸ್ವಲ್ಪ ಹೊತ್ತಿಗೆ ಏನೋ ತಲೆ ಸುತ್ತಿದಂತೆ ಆಯಿತು , ನೀರು ಕುಡಿದು ಬಂದೆ .  ಇಲ್ಲ ಹೊಟ್ಟೆಯೆಲ್ಲ ತಳಮಳ , ಹೊಟ್ಟೆ ನೋವು ಏನೇನೋ ಆಗೋಕೆ ಶುರು . ಹೊಟ್ಟೆಯೆಲ್ಲಾ ತೊಳಸಿದಂತೆ  ಆಗಿ ವಾ೦ತಿ ಬರುವಂತೆ ಆಯಿತು. ವಾಂತಿ ಮಾಡಿದೆ . ಇದನ್ನೆಲ್ಲಾ ನೋಡುತ್ತಾ ಇದ್ದ ಚಿನ್ನು ಸ್ವಲ್ಪ ಅತ್ತಿತ್ತ ಓಡಿದ . ವಾಂತಿ ಮಾಡಿ ಬಂದವಳಿಗೆ  ಹೊಟ್ಟೆ ಸಿಕ್ಕ ಪಟ್ಟೆ  ನೋವು  ಅಲ್ಲೇ ನೆಲದಲ್ಲಿ ಉರುಳಿ ಬಿಟ್ಟೆ ಅಮ್ಮ ಅಮ್ಮ ಎಂದು ನರಳ್ತಾ  ಇದ್ದೆ.
         ಚಿನ್ನುಗೆ ಟೆನ್ಶನ್  ಅವನು ಮಿಯಾವ್ ಮಿಯಾವ್ ಎಂದು ದೊಡ್ಡ  ಸ್ವರದಲ್ಲಿ ಕೂಗಿಕೊಂಡು  ಮನೆಯಿಂದ ಹೊರಗೆ ಹೋಗೋಕೆ ಪ್ರಯತ್ನ ಮಾಡ್ತಾ ಇದ್ದ. ನಾನು ಮನೆ ಬಾಗಿಲು ಮುಚ್ಚಿದ್ದೆ . ಮನೆ ಕಿಟಕಿಯೆಲ್ಲಾ ತೆರೆದಿತ್ತು ಆದರೆ ಚಿನ್ನು ಕಿಟಕಿ ಯಲ್ಲಿ ತೂರಿ ಹೋಗದಷ್ಟು ದೊಡ್ದದಾಗಿ  ಬೆಳೆದಿದ್ದ. ಆದರೂ ಕಿಟಕಿಯ ಮೂಲಕ ಹೊರ ಹೋಗೋದು ಸಾಧ್ಯವೇ ಎಂದು ಪ್ರಯತ್ನ ಪಟ್ಟ . ಅವನ ಯತ್ನ ಫಲಕಾರಿ ಯಾಗಲಿಲ್ಲ . ಮತ್ತೆ ಕೆಳಗೆ ಹಾರಿ ಹೇಗಾದರು ಹೊರಗೆ ಹೋಗೋಕೆ ಸಾಧ್ಯವೇ ಎಂದು ಪ್ರಯತ್ನಿಸುತ್ತಿದ್ದ. ಕೊನೆಗೆ ಬಾಗಿಲ ಬಳಿ ಬಂದು ಅವನ ಉಗುರುಗಳಿಂದ ಅಡ್ಡ ಬಿದ್ದು  ಕೊಂಡು ಬಾಗಿಲು ತೆಗೆಯೋ ಯತ್ನ ! ಚಿಲಕ ಹಾಕದೆ ಇರುತ್ತಿದ್ದರೆ ಬಾಗಿಲು ತೆಗೆದು  ಹೊರಗೆ ಓಡಿ  ಏನಾದ್ರು ಮಾಡಿಯೇ ಬಿಡುತ್ತಿದ್ದ.  ಆದರೆ ಚಿಲಕ ಹಾಕಿದೆ ಎಂದು ಅವನಿಗೆ ತಿಳಿಯದು .
         ಮಿಯಾವ್ ಮಿಯಾವ್ ಎಂದು  ಮನೆ ಒಳಗೆಲ್ಲ ಕೂಗಾಡಿಕೊಂಡು  ಓಡಾಡಿದ. ನಂಗೆ ಅಸಾಧ್ಯ ಹೊಟ್ಟೆನೋವು ಏನು ಮಾಡುವ ಸ್ಥಿತಿಯಲ್ಲಿ  ಇಲ್ಲ ಏಳೋಕೊ  ಆಗದ ಸ್ಥಿತಿ . ಅವನ ಆತಂಕ , ನೆನೆಸಿದರೆ ಈಗಲೂ ಮೈಎಲ್ಲಾ ರೋಮಾಂಚನ ! ಆದರೂ  ಅತ್ತಿತ್ತ ಓಡಾಡಿ ಕಮ್ಮಿ ಎಂದರೂ ೧೦  ಸಲ ನನ್ನ ತಟ್ಟಿ ಮುಟ್ಟಿ  ನೋಡಿ ಕೊಂಡ. ಮೂಸಿ ಮೂಸಿ ( ಆಘ್ರಾಣಿಸಿ ) ನೋಡಿದ . ನನ್ನ ಸುತ್ತ ಸುತ್ತ ಮಿಯಾವ್ ಮಿಯಾವ್ ಎಂದು ಓಡಾಡಿ ತನ್ನ ದುಗುಡ ಪ್ರಕಟಿಸುತ್ತಿದ್ದ  ಸ್ವಲ್ಪ ಹೊತ್ತಾದ ಮೇಲೆ ನಾನು ಸ್ವಲ್ಪ ಸರಿ ಹೋದೆ ಅಂತ  ಆದಾಗ ನನ್ನ ಎದುರೇ ಕಾವಲು  ಕೂತ.  
        ನನ್ನ ಅಮ್ಮ ಒಂದಿಷ್ಟು ಹೊತ್ತು  ಕಳೆದು ಬಂದಾಗ , ನಾನು ಸ್ವಲ್ಪ ಕಷ್ಟ ದಲ್ಲಿ ಎದ್ದು ಬಾಗಿಲು ತೆಗೆದೆ. ತೆಗೆದಿದ್ದೇ  ತಡ ಚಿನ್ನು ನ ವರದಿ ಅದು ಕೇವಲ ಮಿಯಾವ್ ಮಿಯಾವ್ ನಲ್ಲಿ ಎಲ್ಲ ಕಡೆ ಓಡಿ ಓಡಿ  ತೋರಿಸುತ್ತಿದ್ದ. ಅಮ್ಮನಿಗೆ ಅಚ್ಚರಿ ಯಾಕೆ ಈ ಬೆಕ್ಕು ಈ ಪರಿ ಕೂಗಾಡಿ ಓಡಾಡುತ್ತಿದೆ ಇದಕ್ಕೆ ಏನಾಗಿದೆ? ಎಂದು   ಅಮ್ಮ ಮೆಲ್ಲ ಕೇಳಿದರು ಆಗ ನಾನು ಹೇಳಿದ್ದು ಇಸ್ಟೇ ಅವನ ಭಾಷೆ ನಮಗೆ ಅರ್ಥ ಆಗುತ್ತಿದ್ದರೆ ನೀನು  ನನ್ನ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ ಅಥವಾ ಅವನಿಗೆ ಮಾತನಾಡಲು ಬರುತ್ತಿದ್ದರೆ ಎಲ್ಲ ವರದಿ ಕೊಡುತ್ತಿದ್ದ ಅಂದು  ನಂಗೆ ಅನಾಮತ್ತಾಗಿ ಆದ ತೊಂದರೆ ಹೇಳಿ ಕೊಂಡೆ ಹಾಗೂ ಅವನ ಚಡಪಡಿಕೆ ಮತ್ತು ಮನೆಯಿಂದ ಅವನು ಹೊರ ಹೋಗಿ ನಿನ್ನ ಹುಡುಕುವ ಯತ್ನ ಹೇಳಿದಾಗ  ಚಿನ್ನು ಒಬ್ಬ ಅಸಾಮಾನ್ಯ ಬೆಕ್ಕು ಎಂದು ನಮ್ಮಿಬ್ಬರಿಗೂ ಅರಿವಾಗಿತ್ತು

ನಾಳೆ  ನನ್ನ ಬದುಕುಳಿಸಿದ  ಘಟನೆಯೊಂದಿಗೆ ನಿಮ್ಮಲ್ಲಿ ಬರುವೆ :)

1 comment:

padmapani said...

ಬೆಕ್ಕುಗಳಿಗೆ ಇಷ್ಟೊಂದು ಅಂತಃಕರಣ ಇರುತ್ತೆ ಅಂತ ನನ್ನ ಗಮನಕ್ಕೆ ಬಂದದ್ದು ಈಗಲೇ. ಆ ಕಾಲಘಟ್ಟಕ್ಕೆ ಒಯ್ಯುವ ನಿಮ್ಮ ಬರಹ ಎಂದಿನಂತೆ ಸರಳ,ಚೊಕ್ಕ ಅಭಿನಂದನೆಗಳು.