Wednesday, March 27, 2013

ಚಿನ್ನು ಮತ್ತು ಅವನ ಜೀವನ--5

  

ಚಿನ್ನುಗೆ ಮಾತನಾಡೋಕೆ  ಒಂದು  ಬರ್ತಾ ಇರಲಿಲ್ಲ ಅಷ್ಟೇ . ಮತ್ತೆ ಎಲ್ಲ ಗೊತ್ತಾಗ್ತಾ ಇತ್ತು. ಮೊದಲು ಬುಟ್ಟಿಯಲ್ಲಿ ಒಬ್ನೇ ಮಲಗ್ತಾ  ಇದ್ದ. ಸ್ವಲ್ಪ ಸಮಯ ಆದ್ಮೇಲೆ ಅವನಿಗೆ ಒಬ್ಬನೇ ಮಲಗೋಕೆ ಬೇಜಾರು . ಬುಟ್ಟಿಯಲ್ಲಿ ಬಿಟ್ಟು ಬಂದರೆ ನನ್ನ  ಹಿಂದೆ ಎದ್ದು ಓಡಿ  ಬರುತ್ತಿದ್ದ. ನಾನು ಊಟದ ಬಳಿಕ ಪುಸ್ತಕ ಓದುವ ಹುಚ್ಚಲ್ಲಿ ನಿದ್ರೆ ಬರುವವರೆಗೆ ಓದಿಕೊಳ್ಳುತ್ತಿದ್ದೆ. ನಾನು ಕೂತು ಓದಿಕೊಳ್ಳುವವರೆಗೆ ಅವ ನನ್ನ ಮಡಿಲಲ್ಲಿ  ಚಂದಕ್ಕೆ ಕೂತು ಗುರು ಗುರು ಸದ್ದು ಮಾಡುತ್ತಿದ್ದ. ನಾನು ಮಲಗೋಕೆ ಬರುವಾಗ ನನ್ನ ಮುಖವನ್ನೇ ದೈನ್ಯವಾಗಿ ದಿಟ್ಟಿಸಿದರೆ ಅವನ ನೋಟಕ್ಕೆ ನಾನು ಸೋತು ಅವನ್ನು ಜೊತೆಗೆ ಕರೆದು ಕೊಂಡು ನನ್ನ ಜೊತೆಗೆ ಹೊದಿಕೆ ಹೊದೆಸಿ ಮಲಗಿಸಿ ಕೊಳ್ಳುತ್ತಿದ್ದೆ. ಅವನು ಒಂದೇ  ಒಂದು ದಿನ ಹಾಸಿಗೆ ಒದ್ದೆ ಮಾಡಿದವನಲ್ಲ , ಅವನಿಗೆ ನೈಸರ್ಗಿಕ ಕರೆಗೆ ಹೋಗಬೇಕು ಅಂದು ಅನ್ನಿಸಿದಾಗ ಮೆಲ್ಲ ಕಿವಿ ಹತ್ತಿರ ಉಯ್ ಉಯ್ ಎಂದು ಕೂಗಿ ಹೊದಿಕೆ ಎಳೆದು ತಟ್ಟಿ  ನನ್ನ ಎಚ್ಚರಿಸುತ್ತಿದ್ದ.
         ದಿನ ಇಡೀ ಅಮ್ಮನ ಜೊತೆ ಇರುತ್ತಿದ್ದ , ಸಂಜೆ ಹಾಲು ಕುಡಿದ ಕೂಡಲೇ  ನಾನು ಬರುವ  ದಾರಿಯಲ್ಲಿ  ಬಂದು ಕಾದು  ಕೂರುತ್ತಿದ್ದ. ಒಟ್ಟಿನಲ್ಲಿ ಅವನಿಗೆ ಮನುಷ್ಯರ ಜೊತೆ ಬೇಕು. ರಜೆ ದಿನಗಳಂದು ಹಳಿಗೆ ನಾವು ಎಲ್ಲಾದರು ಪೂಜೆ, ಸಮಾರಂಭ , ಔತಣಕ್ಕೆ ಹೊರಡಲು ಶುರು ಮಾಡಿದ ಕೂಡಲೇ ಅವನಿಗೆ ತಿಳಿದು ಹೋಗುತ್ತಿತ್ತು.  ಕಾಲ ಬುಡಕ್ಕೆ ಬಂದು ಗೋಗರೆಯುತ್ತಿದ್ದ , ಕಾಲಿಗೆ ಅಡ್ಡ ಕಟ್ಟುತ್ತಿದ್ದ . ನಾವು ಅವನನ್ನು ಮನೆ ಒಳಗೆ ಬಿಟ್ಟು ಹೋಗುತ್ತಿದ್ದೆವು . ಅವನನ್ನು ಹೊರಗೆ ಬಿಟ್ಟು ಬಾಗಿಲು ಹಾಕಿದ್ರೆ ಅವನಿಗೆ ಒಳಗೆ ಬರಲು ಸಾಧ್ಯವಿರಲಿಲ್ಲ . ಪಾಪ ಅವನಿಗೆ ಹಸಿವೆ ಬಾಯರಿಕೆ  ಆಗೋದು ಬೇಡ ಅಂತ ಮನೆ ಒಳಗೆ ಬಿಟ್ಟು ಹೋಗ್ತಾ ಇದ್ದೆವು. ಬಹುಶಃ ಅವನಿಗೆ ಬೋರ್ ಆಗ್ತಾ ಇತ್ತೋ ಏನೋ ಗೊತ್ತಿಲ್ಲ .  ಆದರೂ ಅವನಿಗೆ ಅನುಕೂಲ  ಆಗ್ಲಿ ಅಂತ ಅಡುಗೆ ಮನೆಯ ಒಂದು ಕಿಟಕಿ ತೆರೆದು , ನೋಡು ಹೀಗೆ ಕಿಟಕಿ ಮೂಲಕ ಒಳಗೆ ಹೊರಗೆ ಹೋಗು ಎಂದು ಹೇಳಿ ಹೋದರೂ ಅವ ಮಾತ್ರ ನಾವು ವಾಪಸು ಬಂದ  ಬಳಿಕ ಕಾಲು ಘಂಟೆ ಸಹಸ್ರ ನಾಮಾರ್ಚನೆ  ಮಾಡ್ತಾನೆ ಇದ್ದ. ಕೆಲವೊಮ್ಮೆ ಅವನ ಕಿರಿ ಕಿರಿ ತಾಳರದೆ ಅವನಿಗೆ ಬೈದು ಸುಮ್ಮನಾಗಿಸಿದ್ದೂ  ಇದೆ. ಆ ಬಗ್ಗೆ ಈಗಲೂ  ಬೇಸರ ಇದೆ ನಂಗೆ .
         ಇಷ್ಟೆಲ್ಲಾ ಒಳ್ಳೆ ಬುದ್ದಿ ಇದ್ದ ಚಿನ್ನು ಸ್ವಲ್ಪ ಪೆದ್ದು ಅಂತಾನೆ ಹೇಳಬಹುದು. ಅವನನ್ನು  ಚಿನ್ನು ಎಂದು  ಯಾರು ಕರೆದರೂ , ಪ್ರೀತಿಯಿಂದ ಅವರ ಬಳಿ ಹೋಗುತ್ತಿದ್ದ , ಎತ್ತಿ ಕೊಳ್ಳೋಕೆ ಬಿಡ್ತಾ ಇದ್ದ . ಪಾಪ ಅವನಿಗೇನು ಗೊತ್ತು "ಬೆಳ್ಳಗೆ ಇರೋದು ಎಲ್ಲವೂ ಹಾಲು ಅಲ್ಲ" ಅಂತ ! ಮನುಷ್ಯರ ಮೋಸ ಅವನಿಗೆಲ್ಲಿ ಅರಿವಾಗಬೇಕು ? ಅವ ಬೆಕ್ಕು... ಹೀಗಾಗಿ ಅವನು ಕೆಲಬಾರಿ ಮೋಸಕ್ಕೆ ಬಲಿಯಾಗಿ ಸ್ವಲ್ಪ ದೂರದ ಮನೆಯಲ್ಲಿ ರಾತ್ರಿ ಬಂಧಿಯಾಗುತ್ತಿದ್ದ. ಮೊದಲು ಇದು ನಂಗೆ ಅರಿವಿಗೆ ಬರದೇ ಇದ್ದರೂ ಸ್ವಲ್ಪ ದಿನದ ಬಳಿಕ ಪತ್ತೆ ಮಾಡಿದೆ. ಪಾಪ ರಾತ್ರಿ ಅಲ್ಲಿ ಅವ  ಇಲಿ ಓಡಿಸಬೇಕು, ಕಾವಲು ಕಾಯಬೇಕು. ಅದೂ ಕತ್ತಲು ಕೋಣೆಯಲ್ಲಿ ಒಬ್ಬಂಟಿಯಾಗಿ ! ಇದು  ಒಂದು ಮುಗ್ಧ ಮಗುವಿಂದ ನನ್ನ ಅರಿವಿಗೆ ಬಂದಿತ್ತು. ಇದಿಕ್ಕೆ ಹೇಳೋದು ಮಕ್ಕಳ ಮನಸ್ಸು  ಅಂತ.
         ಅವನ ಬಂಧನದ ವಿಷಯ ತಿಳಿದ ಮೇಲೆ ನಾನು ಅವನನ್ನು ಕಟ್ಟಿ ಹಾಕೋಕೆ ಪ್ರಾರಂಭ ಮಾಡಿದೆ. ಅಮ್ಮ ನಂಗೆ ಚೆನ್ನಾಗಿ ಬೈಯ್ಯುತ್ತಲೇ ಇದ್ದರು.  ಆದರೂ ಅದನ್ನು ಕಿವಿಗೆ ಹಾಕಿ ಕೊಳ್ಳದೇ ಅವನನ್ನು ಸಂಜೆ  ೫ ರ ಬಳಿಕ  ಕಟ್ಟಿ ಹಾಕ್ತ ಇದ್ದೆ . ಉದ್ದ ದಾರದ ಮೂಲಕ ಕಟ್ಟಿ ಹಾಕಿದರೆ ಅವನ ವಾಕಿಂಗ್ , ಸಣ್ಣ ಬೇಟೆಗೆ ಸಮಸ್ಯೆ ಇರಲಿಲ್ಲ. ಸ್ವಲ್ಪ ದಿನ ಆದ್ಮೇಲೆ ಅವನ ಭ್ರಮೆಗೆ ಅಷ್ಟೇ ಕಟ್ಟಿ ಒಂದು ಅಡಿ ಉದ್ದ ಹಗ್ಗ ಬಿಡುತ್ತಿದ್ದೆ ಹೀಗಾಗಿ ತನ್ನನ್ನು ಕಟ್ಟಿದ್ದಾರೆ ಎಂದೇ ಭಾವಿಸಿ ಸುಮ್ಮನಿರುತ್ತಿದ್ದ. ಕಟ್ಟಲಾದ ಮೇಲೆ ಅವನ ಹಗ್ಗ ಬಿಚ್ಚಿ ಮನೆ ಒಳಗೆ ಬಿಡುತ್ತಿದ್ದೆ. 
          ಅಂದು ಯುಗಾದಿ ಹಿಂದಿನ ದಿನ  , ಬೇಸಿಗೆ ಸಮಯ ಅಂದ್ರೆ ಕೇಳ್ಬೇಕಾ ಹಳ್ಳಿ ,ಕರಾವಳಿಯಲ್ಲಿ ಪವರ್  ಕಟ್ ಸರ್ವೇ ಸಾಮಾನ್ಯ . ಸೆಕೆ ಅಸಾಧ್ಯ .ಅಮ್ಮ ಒಳಗೆ ಏನೋ ಕೆಲಸದಲ್ಲಿ ಇದ್ದರು. ನಾನು ಸೆಕೆ ತಾಳಲಾರದೆ ಬಾಗಿಲು ತೆರೆದು ಬಾಗಿಲ ಹತ್ತಿರ ಕಾರಂತರ "ಮುಗಿದ ಯುದ್ದ"  ಕಾದಂಬರಿ ಹಿಡಿದು ಲಾಂದ್ರದ ಬೆಳಕಲ್ಲಿ ನೆಲದ ಮೇಲೆ ಕೂತು ಓದಿಕೊಳ್ಳುತ್ತಿದ್ದೆ. ಚಿನ್ನು ನನ್ನ ಎದುರೆ ಕೂತು ತೂಕಡಿಸುತ್ತಿದ್ದ . ಆ ದಿನ ಅವನ ಕುತ್ತಿಗೆ ದಾರ ನಾನು ಇನ್ನು ಕಳಚಿರಲಿಲ್ಲ . ಸುಮಾರು ಹೊತ್ತು ಹೀಗೆ ಓದುತ್ತಲೇ  ಇದ್ದೆ. ಸಮಯ ಕಳೆದುದು ಅರಿವಿಗೆ ಬಂದಿರಲಿಲ್ಲ.  ಚಿನ್ನು ಒಮ್ಮೆಗೆ ಬಾಗಿಲ ಹತ್ತಿರ ಹಾರಿ ಬಂದ . ಅಯ್ಯೋ ಬೆಕ್ಕು ಹೋಯಿತು, ಚಿನ್ನು..  ಚಿನ್ನು..  ಎಂದು  ಮಾಡಿದ ಗಲಾಟೆಗೆ ಅಮ್ಮ ಒಳಗಿನಿಂದ ಹೊರಗೆ ಬಂದರು .  ಚಿನ್ನುನ ಹಿಡಿಬೇಕು ಎಂದು ದಡಬಡಿಸಿ ಅವನ ಕತ್ತಲ್ಲಿ ಇದ್ದ ದಾರ ಎಳೆವಾಗ ನಂಗೆ ದೊಡ್ಡ ಆಘಾತ ಅವನ ಬಾಯಲ್ಲಿ ಕಡಂಬಳ  ಹಾವು (ಕಪ್ಪು ಬಿಳುಪು ಹಾವು King Snake ) ಇದು ತೀವ್ರ ವಿಷಕಾರಿ ಹಾವು! ಒಂದು ಘಂಟೆ ಒಳಗೆ ಪ್ರಥಮ ಚಿಕಿತ್ಸೆ ಸಿಗದೇ ಇದ್ರೆ ಪ್ರಾಣವೇ ಹೋಗುವಷ್ಟು ಅಪಾಯಕಾರಿ ವಿಷ ಜಂತು . ನನ್ನ ಕೈಕಾಲು ಆಡದು ನಾನು ಹಗ್ಗ ಜಗ್ಗಿದ ಭಯಕ್ಕೆ  ಅವನ ಹಿಡಿತ ಸಡಿಲ ಆಗಿ  ಹಾವು ಮನೆ ಒಳಗೆ ಬಂದು ಬಿಟ್ಟಿತು.
          ಈ ಕತ್ತಲಲ್ಲಿ ಈ ವಿಷ ಜಂತುಗಳು ಸಿಕ್ಕಾಪಟ್ಟೆ ಚುರುಕು ಅದು ಮನೆ ಸೇರಿ ಆಯಿತು. ಅಯ್ಯೋ ಮನೆಯಲ್ಲಿ ಅಪ್ಪ ಬೇರೆ ಇರಲಿಲ್ಲ . ಅಮ್ಮ ಅಯ್ಯೋ..  ಅಯ್ಯೋ..  ಎಂದು ಕೂಗಿ ಕೊಂಡರು. ನಂಗೆ ಎಲ್ಲೋ ಓದಿದ ನೆನಪು ಪಟ್ಟ ತಲೆಗೆ ಹೊಳೆದು  ಅಲ್ಲೇ ಪಕ್ಕ ಇದ್ದ ಟಾರ್ಚ್ ಬೆಳಕಲ್ಲಿ ಹಾವನ್ನು ಹುಡುಕಿ ಅದರ ಕಣ್ಣಿಗೆ ಹಿಡಿದೆ. ಹಾವಿನ ಚಲನೆ ಸ್ತಬ್ದವಾಯಿತು . ಅಮ್ಮ ಚಿನ್ನುನ  ಎತ್ತಿ ಒಳಗೆ ದಬ್ಬಿ ಬಾಗಿಲು ಹಾಕಿದರು. ನಮ್ಮ  ದೊಡ್ಡ ದ್ವನಿ ಕೇಳಿ ನೆರೆ ಮನೆಯವರು ಓಡಿ  ಬಂದರು. ಬಂದವರಿಗೆ ಅಮ್ಮ ವಿಷಯ ಹೇಳಿದಾಗ ನೆರೆ ಮನೆಯವರು ಆ ಹಾವಿಗೆ ಒಂದು ಗತಿ ಕಾಣಿಸಿದರು.
         ಆದರೆ ಬಂದವರಲ್ಲಿ ಒಬ್ಬರು ಬೆಕ್ಕುಗಳ ದ್ವೇಷಿ ಅವರು ನಿಮಗೆ ಹೇಳಿದ್ರೆ ಗೊತ್ತಾಗಲ್ಲ ಬೆಕ್ಕು ಸಾಕಿದರೆ ಹೀಗೆ ಅಂದ್ರು, ನಾನು ತಡೆದು ಹೇಳಿದೆ ಇಂದು ನಾನು ಬದುಕಿ ಉಳಿದಿದ್ದೆ ನನ್ನ  ಚಿನ್ನುವಿನಿಂದ  ನಾನು ಬಾಗಿಲ ಪಕ್ಕವೇ ಇದ್ದೆ ನಂಗೆ ಹಾವು ಬಂದಿದ್ದೇ  ಗೊತ್ತಾಗಲಿಲ್ಲ ಆದರೆ ಚಿನ್ನು ಅದನ್ನು ಹಿಡಿಯಲು ಹೋದಾಗ ಹಾವು ಬಂದಿದ್ದರರಿವಾಗಿದ್ದು , ಅವನಿಲ್ಲದೆ ಹೋಗಿದ್ದರೆ ಹಾವು ಒಳಗೆ ಬಂದು ಕಚ್ಚಿದ ಮೇಲೆ ನಂಗೆ ಅರಿವಾಗ್ತಾ ಇತ್ತು, ಇನ್ನು ಏನೋ ಆವಾಂತರ ಆಗುತ್ತಿತ್ತು ಈ ಕರೆಂಟ್ ಇಲ್ಲದ ಸಮಯದಲ್ಲಿ ಎಂದು  ಬಾಯಿ ಮುಚ್ಚಿಸಿದೆ.
        ಅಂದು ಚಿನ್ನು ನನ್ನ ಪ್ರಾಣ ಉಳಿಸಿದ  ಪರಿಣಾಮವಾಗಿ ಬದುಕುಳಿದು ಹಲವು ಯುಗಾದಿ ಕಂಡೆ .... ಕಾಣುತ್ತಾ ಇರುವೆ....

ನಾಳೆ "ಚಿನ್ನು ಅಂದ್ರೆ ನನ್ನ ಅಲಾರಂ" ಹೇಗೆ ಅಂತ  ನೋಡೋಣ    
           
      

2 comments:

padmapani said...

ನೀವು ಬಾಲ್ಯದ ಚಟುವಟಿಕೆಗಳೆಲ್ಲ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಿರುವಿರಿ,ನಿಮ್ಮ ಬರಹಗಳ ಮೂಲಕ ಕರಾವಳಿ ತೀರ,ಅಲ್ಲಿಯ ಜೀವನ ಕ್ರಮ-ಎಲ್ಲವನ್ನೂ ತಿಳಿಯುವ ಭಾಗ್ಯ ದೊರಕಿಸಿಕೊಡುತ್ತಿರುವ ನಿಮಗೆ ಧನ್ಯವಾದಗಳು

Srinidhi Rao said...

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ....
ಪ್ರೀತಿಯಿಂದ ,
ಶ್ರೀನಿಧಿ.